Bagalkote

ಬಾಗಲಕೋಟೆ ಕ್ರೌರ್ಯ: ಕೂಲಿ ಕೇಳಿದ್ದಕ್ಕೆ ವೆಲ್ಡಿಂಗ್ ಮಷಿನ್‌ನಿಂದ ಮೈತುಂಬಾ ಶಾಕ್ ಕೊಟ್ಟ ಕಿರಾತಕರು!

Share

• ಕೂಲಿ ಕೇಳಿದ್ದಕ್ಕೆ ಕಾರ್ಮಿಕನ ಮೇಲೆ ಅಮಾನವೀಯ ಹಲ್ಲೆ
• ವೆಲ್ಡಿಂಗ್ ಮಷಿನ್‌ನಿಂದ ಮೈತುಂಬಾ ವಿದ್ಯುತ್ ಶಾಕ್
• ಮಹಾಲಿಂಗಪುರ ಪೊಲೀಸ್ ಇಲಾಖೆಯ ವಿಳಂಬ ಧೋರಣೆ
• ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಮಿಕನ ಸಾವು-ಬದುಕಿನ ಹೋರಾಟ

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ಮಾನವೀಯತೆ ಮರೆತ ಘಟನೆಯೊಂದು ನಡೆದಿದೆ. ತಾನು ಮಾಡಿದ ಕೆಲಸಕ್ಕೆ ಕೂಲಿ ಕೇಳಿದ ತಪ್ಪಿಗೆ ಗ್ಯಾರೇಜ್ ಮಾಲೀಕ ಕಾರ್ಮಿಕನ ಮೇಲೆ ವೆಲ್ಡಿಂಗ್ ಮಷಿನ್‌ನಿಂದ ಶಾಕ್ ನೀಡಿ ಹಲ್ಲೆ ಮಾಡಿದ್ದು, ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.
ಮಹಾಲಿಂಗಪುರ ಪಟ್ಟಣದ ತೆರದಾಳ ಗ್ಯಾರೇಜ್‌ನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಪರಶುರಾಮ ಹಜಾರೆ ಎಂಬ ಕಾರ್ಮಿಕನ ಮೇಲೆ ಈ ಘೋರ ಹಲ್ಲೆ ನಡೆದಿದೆ. ಕಳೆದ 27 ರಂದು ಪರಶುರಾಮ ತನ್ನ ಕೂಲಿ ಹಣ ಕೇಳಿದ್ದಕ್ಕೆ ಸಿಟ್ಟಿಗೆದ್ದ ಗ್ಯಾರೇಜ್ ಮಾಲೀಕ ಇಸ್ಮಾಯಿಲ್ ತೆರದಾಳ ಹಾಗೂ ಆತನ ಸಂಬಂಧಿಕರು ಸೇರಿ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಕಿರಾತಕರು, ವೆಲ್ಡಿಂಗ್ ಮಷಿನ್ ಬಳಸಿ ಕಾರ್ಮಿಕನ ಕೈ, ಕಾಲು ಹಾಗೂ ಮುಖದ ಭಾಗಕ್ಕೆ ವಿದ್ಯುತ್ ಶಾಕ್ ನೀಡಿ ವಿಕೃತ ಸಂಭ್ರಮ ಪಟ್ಟಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಪರಶುರಾಮ ಕಿಮ್ಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಕೃತ್ಯ ನಡೆದು ಹಲವು ದಿನಗಳಾದರೂ ಮಹಾಲಿಂಗಪುರ ಪೊಲೀಸರು ಕೇವಲ ಎಫ್‌ಐಆರ್ (FIR) ದಾಖಲಿಸಿ ಸುಮ್ಮನಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಭಾವಿಗಳಿಗೆ ಒಂದು ನ್ಯಾಯ, ಬಡವರಿಗೊಂದು ನ್ಯಾಯವೇ ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಆರೋಪಿ ಇಸ್ಮಾಯಿಲ್‌ನನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಇಂತಹ ಮಾರಣಾಂತಿಕ ದಾಳಿ ನಡೆದರೂ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Tags:

error: Content is protected !!