• ದಾದನಟ್ಟಿ ಗ್ರಾಮದಲ್ಲಿ ಯುವಕನ ಮೇಲೆ ಅಟ್ಟಹಾಸ
• ಕಿಡ್ನಾಪ್ ಮಾಡಿ ಮಾರಣಾಂತಿಕ ಹಲ್ಲೆ ಆರೋಪ
• ಚುನಾವಣಾ ವೈಷಮ್ಯಕ್ಕೆ ಕೊಲೆಗೆ ಸ್ಕೆಚ್?
• ಐವರು ಆರೋಪಿಗಳ ಪತ್ತೆಗೆ ಪೊಲೀಸರ ಬಲೆ
ಹಳೆ ದ್ವೇಷ ಹಾಗೂ ಚುನಾವಣಾ ವೈಷಮ್ಯದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ದಾದನಟ್ಟಿಯಲ್ಲಿ ಯುವಕನೊಬ್ಬನ ಮೇಲೆ ಬರ್ಬರ ಹಲ್ಲೆ ನಡೆದಿದೆ. ಮದುವೆ ಪತ್ರಿಕೆ ಹಂಚಲು ತೆರಳಿದ್ದ ಸಚಿನ್ ಗೌಡಪ್ಪ ಸೋಕನಾದಾಗಿ ಎಂಬ ಯುವಕನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ, ರಾಡ್ ಮತ್ತು ಕೊಡಲಿಗಳಿಂದ ಹಲ್ಲೆ ನಡೆಸಲಾಗಿದ್ದು, ಸದ್ಯ ಯುವಕ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಮುಧೋಳ ತಾಲೂಕಿನ ದಾದನಟ್ಟಿ ಗ್ರಾಮದಲ್ಲಿ 24 ವರ್ಷದ ಯುವಕ ಸಚಿನ್ ಸೋಕನಾದಾಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ಅರುಣ್ ಜೋಗಣ್ಣವರ, ಸುನಿಲ್ ಕಿಲಬನೂರು, ವಿಠಲ ಮಳಲಿ, ಕೆಂಚಪ್ಪ ಸೇರಿದಂತೆ ಐದು ಜನರ ವಿರುದ್ಧ ಈ ಹಲ್ಲೆಯ ಆರೋಪ ಕೇಳಿಬಂದಿದೆ. ಮದುವೆ ಕಾರ್ಡ್ ಹಂಚಲು ಹೋಗಿದ್ದ ಸಚಿನ್ನನ್ನು ಅಪಹರಿಸಿದ ಆರೋಪಿಗಳು, ರಾಡ್, ಕುಡಗೋಲು ಹಾಗೂ ಕೊಡಲಿಗಳಿಂದ ಹಲ್ಲೆ ನಡೆಸಿ ಕೈ-ಕಾಲು ಮುರಿದಿದ್ದಾರೆ. ಯುವಕ ಪ್ರಜ್ಞೆ ತಪ್ಪಿದ ಬಳಿಕ ಆತನನ್ನು ಕುಳಗೇರಿ ಕ್ರಾಸ್ ಬಳಿ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಗಾಯಾಳುವನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳು ಸಚಿನ್ ನೀಡಿರುವ ಹೇಳಿಕೆಯ ಪ್ರಕಾರ, ಆರೋಪಿಗಳು ‘ದೋಸ್ತಿ ಸರ್ಕಾರ’ ಹೆಸರಿನಲ್ಲಿ ಸಂಘವೊಂದನ್ನು ಮಾಡಿಕೊಂಡು ಗ್ರಾಮದಲ್ಲಿ ಗುಂಡಾಗಿರಿ ನಡೆಸುತ್ತಿದ್ದಾರೆ. ಈ ಹಿಂದೆ ನ್ಯಾಯಾಲಯದಲ್ಲಿ ಸಂಧಾನವಾಗಿದ್ದರೂ ಸಹ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಮ್ಮ ವಿರುದ್ಧ ಪ್ರಚಾರ ಮಾಡಿದ್ದ ಎಂಬ ದ್ವೇಷದಿಂದ ಈಗ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಲೋಕಾಪುರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.

