• ಬಾಗಲಕೋಟೆ ಉಪಚುನಾವಣೆ ಮತ ಎಣಿಕೆಗೆ ಸಿದ್ಧತೆ
• ಮೇ 4ರಂದು ಬೆಳಿಗ್ಗೆ 8ಕ್ಕೆ ಆರಂಭ
• 23 ಸುತ್ತುಗಳಲ್ಲಿ ಹೊರಬೀಳಲಿದೆ ಅಭ್ಯರ್ಥಿಗಳ ಫಲಿತಾಂಶ
• ಬಾಗಲಕೋಟೆಯಲ್ಲಿ ನಾಳೆ ಮದ್ಯ ಮಾರಾಟ ನಿಷೇಧ

ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 4ರಂದು ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸರ್ವಸನ್ನದ್ಧವಾಗಿದ್ದು, ಅಭ್ಯರ್ಥಿಗಳ ಭವಿಷ್ಯದ ಬಾಕ್ಸ್ ನಾಳೆ ಓಪನ್ ಆಗಲಿದೆ.

ಜಿಲ್ಲಾಧಿಕಾರಿಗಳಾದ ಸಂಗಪ್ಪ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಜಿಲ್ಲಾಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮೇ 4ರಂದು ನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟು 1,78,273 ಇವಿಎಂ ಮತಗಳು, 270 ಅಂಚೆ ಮತ ಹಾಗೂ 120 ಸೇವಾ ಮತಗಳ ಎಣಿಕೆಗಾಗಿ 14 ಟೇಬಲ್‌ಗಳನ್ನು ಸಜ್ಜುಗೊಳಿಸಲಾಗಿದ್ದು, ಪ್ರತಿಯೊಂದು ಟೇಬಲ್’ಗೆ ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ. ಒಟ್ಟು 23 ಸುತ್ತುಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಅಂಚೆ ಮತ್ತು ಸೇವಾ ಮತಗಳಿಗಾಗಿ ತಲಾ ಒಂದೊಂದು ಪ್ರತ್ಯೇಕ ಟೇಬಲ್ ನಿಗದಿಪಡಿಸಲಾಗಿದ್ದು, ಒಟ್ಟು 63 ಸಿಬ್ಬಂದಿಗಳನ್ನು ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೇ 4ರ ಬೆಳಿಗ್ಗೆ 6ರಿಂದ ಮೇ 5ರ ಬೆಳಿಗ್ಗೆ 6ರವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಕಲಂ 163ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 10 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಮತ್ತು ಏಜೆಂಟರು ಬೆಳಿಗ್ಗೆ 7 ಗಂಟೆಯೊಳಗೆ ಕೇಂದ್ರದೊಳಗೆ ಹಾಜರಿರಲು ಸೂಚಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಪಾರದರ್ಶಕವಾಗಿ ಮತ ಎಣಿಕೆ ನಡೆಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ.
ಇನ್ನು ಬಾಗಲಕೋಟೆ ಎಸ್ಪಿ. ಸಿದ್ಧಾರ್ಥ್ ಗೋಯಲ್ ಅವರು, ಈಗಾಗಲೇ ಮತ ಎಣಿಕೆ ಕೇಂದ್ರಕ್ಕೆ ಚುನಾವಣಾ ಆಯೋಗದ ಆದೇಶದಂತೆ 3 ಹಂತದ ಬಂದೋಬಸ್ತ್ ಮಾಡಲಾಗಿದೆ. ಇದಕ್ಕಾಗಿ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಮತ ಎಣಿಕೆ ಕೇಂದ್ರದ 200 ಮೀಟರ್ ವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಕೇಂದ್ರದಿಂದ ಸ್ವಲ್ಪ ದೂರ ಮಾಡಲಾಗಿದೆ. ಪ್ರತ್ಯೇಕ ಮಿಡೀಯಾ ರೂಮ್ ನಿರ್ಮಿಸಲಾಗಿದೆ. 3 ಹಂತದ ಪರಿಶೀಲನೆಯನ್ನು ಮಾಡಿ ಜನರನ್ನು ಒಳ ಬಿಡಲಾಗುವುದು. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲಾಗುವುದು ಎಂದರು.
