Bagalkote

ಇಳಕಲ್‌ನಲ್ಲಿ ಜೀವಜಲಕ್ಕಾಗಿ ಹಾಹಾಕಾರ: ಶಾಸಕರ ಕ್ಷೇತ್ರದಲ್ಲಿ ಖಾಲಿ ಕೊಡ ಹಿಡಿದು ರಸ್ತೆಗಿಳಿದ ಮಹಿಳೆಯರು!

Share

• ಇಳಕಲ್‌ನಲ್ಲಿ ಜೀವಜಲಕ್ಕಾಗಿ ಜನರ ಪರದಾಟ
• 20 ದಿನಗಳಿಂದ ಬಾರದ ನೀರು: ರಸ್ತೆಗಿಳಿದ ಮಹಿಳೆಯರು
• ಕಾಶಪ್ಪನವರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ
• ನಗರಸಭೆ ಮತ್ತು ಅಧಿಕಾರಿಗಳ ವಿರುದ್ಧ ಜನತೆಯ ಆಕ್ರೋಶ

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಕೋಪಕ್ಕೆ ತಲುಪಿದೆ. ಕಳೆದ 20 ದಿನಗಳಿಂದ ಹನಿ ನೀರಿಗೂ ಪರದಾಡುತ್ತಿರುವ ಜನರು, ಇಂದು ರಸ್ತೆ ತಡೆ ನಡೆಸಿ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯ ಆರಂಭದಲ್ಲೇ ಇಳಕಲ್ ನಗರದಲ್ಲಿ ನೀರಿನ ಬವಣೆ ನೀಗುತ್ತಿಲ್ಲ. ಶಾಸಕ ವಿಜಯಾನಂದ ಕಾಶಪ್ಪನವರ ಅವರ ಕ್ಷೇತ್ರದಲ್ಲೇ ಜನರು ಹನಿ ನೀರಿಗಾಗಿ ಟ್ಯಾಂಕರ್ ಮೊರೆ ಹೋಗುವಂತಾಗಿದೆ. ಅದರಲ್ಲೂ ಎಸ್ಪಿ ಕಾಲೋನಿ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಕಳೆದ 20 ದಿನಗಳಿಂದ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆಯರು ಖಾಲಿ ಕೊಡಗಳೊಂದಿಗೆ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರದಲ್ಲಿ ಇಂದು ಇಂತಹ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ನೀರು ಪೂರೈಕೆಯ ಯಂತ್ರದ ರಿಪೇರಿ ನೆಪ ಹೇಳುತ್ತಿರುವ ನಗರಸಭೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ತೀವ್ರ ವಾಗ್ವಾದ ನಡೆಸಿದರು. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ನಿರಂತರವಾಗಿದ್ದು, ಈ ಹಿಂದೆ ಶಾಸಕರ ಮನೆಗೂ ಮುತ್ತಿಗೆ ಹಾಕಲಾಗಿತ್ತು. ಆದರೂ ಶಾಶ್ವತ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಸರ್ಕಾರದ ಕೋಟಿ ಕೋಟಿ ಅನುದಾನದ ಯೋಜನೆಗಳು ಕೇವಲ ಕಾಗದದ ಮೇಲೆ ಉಳಿದಿವೆಯೇ ಎಂದು ಪ್ರಶ್ನಿಸುತ್ತಿರುವ ಇಳಕಲ್ ನಿವಾಸಿಗಳು, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

Tags:

error: Content is protected !!