ಇಳಕಲ್ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾ

ನೀರಿಲ್ಲದೆ ರಸ್ತೆಗಿಳಿದ ವಾರ್ಡ್ ನಂಬರ್ 7ರ ಜನರು
ಜಾಕ್ ವೆಲ್ ರಿಪೇರಿ ನೆಪ; ಅಧಿಕಾರಿಗಳ ನಿರ್ಲಕ್ಷ್ಯ
ಶಾಸಕರ ವಿರುದ್ಧ ತಿರುಗಿಬಿದ್ದ ಇಳಕಲ್ ಜನತೆ
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗ ಸ್ಫೋಟಗೊಂಡಿದೆ. ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಇದ್ದರೂ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಂದು ಲಕ್ಷ ಜನಸಂಖ್ಯೆ ಇರುವ ಈ ನಗರ ಈಗ ಹನಿ ನೀರಿಗೂ ಪರದಾಡುವಂತಾಗಿದೆ.
ಇಳಕಲ್ ನಗರಕ್ಕೆ ಆಲಮಟ್ಟಿ ಜಲಾಶಯದ ಜಾಕ್ ವೆಲ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಇದ್ದರೂ, ಕಳೆದ ಎರಡು ವರ್ಷಗಳಿಂದ ಅಧಿಕಾರಿಗಳು ಕೇವಲ ‘ರಿಪೇರಿ’ ಎಂಬ ಹಳೆಯ ನೆಪವನ್ನೇ ಹೇಳುತ್ತಿದ್ದಾರೆ. ಜಿಲ್ಲೆಯ ಪ್ರಭಾವಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಕ್ಷೇತ್ರದಲ್ಲಿ ಜನಸಾಮಾನ್ಯರು ಕುಡಿಯುವ ನೀರಿಗಾಗಿ ನಿತ್ಯ ಬೀದಿಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಸರಿಗೆ ಮಾತ್ರ 24×7 ನೀರು ಪೂರೈಕೆ ಎನ್ನಲಾಗುತ್ತಿದೆ, ಆದರೆ ವಾಸ್ತವದಲ್ಲಿ ವಾರ ಕಳೆದರೂ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಅಧಿಕಾರಿಗಳ ಈ ಉಡಾಫೆ ಧೋರಣೆಯಿಂದಾಗಿ ಜನರು ಈಗಾಗಲೇ ಹಲವು ಬಾರಿ ರಸ್ತೆ ತಡೆದು ಪ್ರತಿಭಟಿಸಿದ್ದು, ಶಾಸಕರ ಮನೆಗೂ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಬೇಸಿಗೆಯ ಬಿಸಿಲಿನಿಂದಾಗಿ ನೀರಿನ ಹಾಹಾಕಾರ ಇನ್ನುಳಿದ ವಾರ್ಡ್ಗಳಿಗೂ ವ್ಯಾಪಿಸಿದ್ದು, ಅದರಲ್ಲೂ ವಾರ್ಡ್ ನಂಬರ್ 7ರಲ್ಲಿ ಕಳೆದ 20 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಇಳಕಲ್ನ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಮಧ್ಯರಾತ್ರಿ 2 ಗಂಟೆಗೆ ನೀರು ಬಿಡುವುದು, ಅದು ಕೇವಲ 10 ನಿಮಿಷಕ್ಕೆ ಸೀಮಿತವಾಗುವುದು ಜನರನ್ನು ಕೆರಳಿಸಿದೆ. ಮೋಟಾರ್ ಸಮಸ್ಯೆ ಮತ್ತು ವಾಲ್ ಅಳವಡಿಕೆಯಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಜನರು, ತಕ್ಷಣ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.
