festival

ಕಾಗವಾಡದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ಸಂಭ್ರಮ: ಶೈಕ್ಷಣಿಕ ಸಾಧಕರಿಗೆ ಸನ್ಮಾನ, ಜ್ಞಾನದೀವಿಗೆಗೆ ನಮನ

Share

ಕಾಗವಾಡ ತಾಲೂಕಿನ ತಹಶೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ, ಶಿವಾನಂದ ಮಹಾವಿದ್ಯಾಲಯ, ವಕೀಲರ ಸಂಘ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸಂಘಟನೆಗಳ ವತಿಯಿಂದ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೫ನೇ ಜಯಂತಿಯನ್ನು ಅತ್ಯಂತ ಭಕ್ತಿಭಾವ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಂಗಳವಾರ ಬೆಳಿಗ್ಗೆ ತಹಶೀಲ್ದಾರ್ ರವೀಂದ್ರ ಹಾದಿಮನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಬಾವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರವೀಂದ್ರ ಗುದುಗೆನ್ನವರ್, ಪಿಎಸ್‌ಐ ರಾಘವೇಂದ್ರ ಖೋತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ತಾಲೂಕು ಆಡಳಿತದ ವತಿಯಿಂದ ವಿವಿಧ ಕಾರ್ಯಕ್ರಮಗಳ ಮೂಲಕ ಜಯಂತಿ ಆಚರಣೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರು, “ಜ್ಞಾನ, ಪರಿಶ್ರಮ ಮತ್ತು ದೃಢಸಂಕಲ್ಪದ ಮೂಲಕ ಅಸಾಧ್ಯವಾದುದನ್ನು ಸಾಧಿಸಿದ ಮಹಾನ್ ನಾಯಕ ಡಾ. ಅಂಬೇಡ್ಕರ್. ಶಿಕ್ಷಣದ ಮೂಲಕ ಸಮಾಜ ಪರಿವರ್ತನೆ ಸಾಧ್ಯವೆಂಬುದನ್ನು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟಿದ್ದಾರೆ. ಮಾನವ ಗೌರವ, ಸಮಾನ ಅವಕಾಶ ಮತ್ತು ಸಾಂವಿಧಾನಿಕ ಹಕ್ಕುಗಳ ಮಹತ್ವವನ್ನು ದೇಶಕ್ಕೆ ಬೋಧಿಸಿದ ದೃಷ್ಟಾರ ಅವರು,” ಎಂದು ತಿಳಿಸಿದರು. ಅಲ್ಲದೆ, ಯುವಜನತೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸ:
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ಬೆಳಗಾವಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ವಿದ್ಯಾಧರ ದಶರತ್ ಮನೋಜ್ ಅವರು ಮಾತನಾಡಿ, ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶಿಕ್ಷಣವೇ ಶಾಶ್ವತ ಪರಿಹಾರವಾಗಿದೆ ಎಂದರು. ದಲಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮಾರ್ಗದರ್ಶನ ಹಾಗೂ ಶೈಕ್ಷಣಿಕ ಸಹಾಯ ಯೋಜನೆಗಳ ಮಹತ್ವವನ್ನು ವಿವರಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಜಾಗೃತಿ ಮೂಡಿಸಲು ಕೈಗೊಂಡಿರುವ ಉಪಕ್ರಮಗಳನ್ನು ಉಲ್ಲೇಖಿಸಿ, ಶಿಕ್ಷಣದ ಮೂಲಕ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಬೆಳೆಸಿಕೊಳ್ಳುವುದು ಅಗತ್ಯವೆಂದು ಹೇಳಿದರು.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾನೂನು ಸಚಿವರಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಂಡು, ಶೋಷಿತ ಸಮುದಾಯಗಳಿಗೆ ನ್ಯಾಯ ಸಿಗುವಂತೆ ಕಾನೂನುಗಳನ್ನು ರೂಪಿಸಿದ್ದಾರೆ ಎಂದು ಅವರು ಸ್ಮರಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಇಒ ಪಾಂಡುರಂಗ ಮದಬಾವಿ ಅವರು ಅಂಬೇಡ್ಕರ್ ಅವರ ಶೈಕ್ಷಣಿಕ ಚಿಂತನೆಗಳ ಕುರಿತು ವಿವರಿಸಿದರು.

ಗೌರವ ಮತ್ತು ಸನ್ಮಾನ:
ಜಯಂತಿ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ತಹಶೀಲ್ದಾರ್ ಸನ್ಮಾನಿಸಿದರು. ಶೇಡಬಾಳದ ನಿವೃತ್ತ ಪ್ರಧಾನ ಗುರುಗಳಾದ ಬಿ.ಪಿ. ಕಾಂಬಳೆ ಅವರ ಮೊಮ್ಮಕ್ಕಳಾದ, ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸೃಷ್ಟಿ ಅಮರ್ ಕಾಂಬಳೆ ಮತ್ತು ಕಾಗವಾಡದ ಸೃಷ್ಟಿ ಸಿಂಗೆ ಅವರು ಜಿಲ್ಲಾ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ವಿಶೇಷವಾಗಿ ಗೌರವಿಸಲಾಯಿತು.

ಇದೇ ವೇಳೆ ರಮಾಬಾಯಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ನಿರ್ಮಿಸಿದ ‘ಬುದ್ಧ ವಿಹಾರ ಅಮ್ರಪಾಲಿ’ ತೈಲಚಿತ್ರವನ್ನು ಅಧಿಕಾರಿಗಳು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಗ್ರೇಡ್-೨ ತಹಶೀಲ್ದಾರ್ ರಶ್ಮಿ ಜಕಾತೆ, ತಾಲೂಕು ವೈದ್ಯಾಧಿಕಾರಿ ಡಾ. ಪುಷ್ಪಲತಾ ಸುನದಕಲ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ, ಪಿಎಸ್‌ಐ ರಾಘವೇಂದ್ರ ಖೋತ, ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಅರುಣ ಫರಾಂಡೆ, ಸಮಾಜ ಕಲ್ಯಾಣ ಇಲಾಖೆಯ ಚಿದಾನಂದ ಬಡಖಂಬಿ, ಸಿದ್ದಾರ್ಥ್ ನಾಗನೂರ, ಶ್ರೀಮತಿ ಪ್ರಿಯದರ್ಶಿನಿ, ಅಣ್ಣಪ್ಪ ಪಾಂಡ್ರೆ, ಭರತ್ ಬಲವಡೆ ಸೇರಿದಂತೆ ದಲಿತ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕಾಗವಾಡದ ಬಸವನಗರದಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಮಾಜದ ಮುಖಂಡರು ಅರ್ಥಪೂರ್ಣವಾಗಿ ಜಯಂತಿ ಆಚರಿಸಿದರು. ಮಹಿಳಾ ಸಂಘದ ವತಿಯಿಂದ ಭವ್ಯ ಮೆರವಣಿಗೆ ನಡೆಯಿತು. ಶೇಡಬಾಳ ನಗರ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ಉತ್ಕರ್ಷ ಪಾಟೀಲ್, ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಹಾಗೂ ಸದಸ್ಯರು ಪ್ರತಿಮೆಗೆ ಪೂಜೆ ಸಲ್ಲಿಸಿದರು. ಹರಳಯ್ಯ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳು ಜಯಂತಿಯನ್ನು ಆಚರಿಸಿದವು.

ಉಗಾರ್, ಶಿರಗುಪ್ಪಿ, ಜುಗುಳ, ಐನಾಪುರ, ಮಂಗಸೂಳಿ, ಮೋಳೆ ಸೇರಿದಂತೆ ತಾಲೂಕಿನಾದ್ಯಂತ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಅತ್ಯಂತ ಸಡಗರದಿಂದ ಆಚರಿಸಲಾಯಿತು.

Tags:

error: Content is protected !!