• ಅಂಬೇಡ್ಕರ್ 135ನೇ ಜಯಂತಿ ಅದ್ಧೂರಿ ಆಚರಣೆ
• ಸಾಧಕರಿಗೆ ಸಿಎಂರಿಂದ ಅಂಬೇಡ್ಕರ್ ಪ್ರಶಸ್ತಿ ಪ್ರದಾನ
• ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ
• ಸಮಾನತೆಯ ಸಮಾಜಕ್ಕಾಗಿ ಬಾಬಾಸಾಹೇಬರ ತತ್ವ ಪಾಲಿಸಿ

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ, ಅಂಬೇಡ್ಕರ್ ಪ್ರಶಸ್ತಿಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರರ ತತ್ವಾದರ್ಶಗಳನ್ನು ಅನುಸರಿಸಲು ಕರೆ ನೀಡಿದರು. ಇನ್ನು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು, ಅಸ್ಪೃಶ್ಯತೆಯ ಕಾರಣಕ್ಕೆ ಕುಡಿಯಲು ನೀರು ಸಿಗದೇ, ಓದುವ ವಿದ್ಯೆ ದೂರವಾಗಿ, ಜನರು ತಮ್ಮ ಹಕ್ಕುಗಳಿಗಾಗಿ ಒದ್ದಾಟ ನಡೆಸುತ್ತಿದ್ದ ಸಂದರ್ಭವನ್ನು ಕಣ್ಣಾರೆ, ಕಂಡು ತಾವೂ ಅದನ್ನು ಅನುಭವಿಸಿ ಮುಂದೆ ಶಿಕ್ಷಣ ಎಂಬ ಸಂಜೀವಿನಿಯ ಮೂಲಕವೇ ದೇಶದ ಜನರಿಗೆ ಅದರಲ್ಲೂ ಶೋಷಿತ ವರ್ಗದ ಜನರಿಗೆ ಸಮಾನ ಹಕ್ಕುಗಳನ್ನು ಒದಗಿಸುವ ಕೆಲಸವನ್ನು ಯಾರಾದರೂ ಮಾಡಿದ್ದರೆ ಅದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಅವರು ಹೇಳಿದರು.
ದೇಶದ ಬಹು ಜನರ ಬದುಕಿನ ಆಶಯಕ್ಕೆ ವಿರುದ್ಧವಾಗಿದ್ದಂತಹ ಧಾರ್ಮಿಕ ವಿಷದ ಕಂತೆಯಾಗಿದ್ದ ಮನುಸ್ಮೃತಿಯನ್ನು ಸುಟ್ಟ ಬಾಬಾ ಸಾಹೇಬರು, ಕುಡಿಯುವ ನೀರಿಗಾಗಿ ನಡೆದ ಜಗತ್ತಿನ ಮೊದಲ ಹೋರಾಟವಾದ ಮಹಾಡ್ ಚಳುವಳಿಯ ನೇತೃತ್ವವನ್ನು ವಹಿಸಿದ್ದರು. ಬಹು ಜನರ ಪರವಾಗಿ, ಪ್ರಜಾಪ್ರಭುತ್ವ ಉಳಿವಿಗಾಗಿ ಬಹುದೊಡ್ಡ ಧರ್ಮಯುದ್ಧ ಮಾಡಿದ ಜಗತ್ತಿನ ಮಹಾನ್ ನಾಯಕ ಎಂದರೆ ಅದು ಬಾಬಾ ಸಾಹೇಬರು ಎಂದು ಹೇಳಿದರು.
ಬಾಬಾ ಸಾಹೇಬರು ಹೇಳಿದ ಈ ವಿಷದ ಪುಸ್ತಕದ ಮಾತನ್ನೇ ಇತ್ತೀಚೆಗೆ ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದ್ದರು. ಆದರೆ ಆ ಅಂಶವನ್ನೂ ಸಹ ವಿವಾದಕ್ಕೆ ಗುರಿಪಡಿಸಲಾಯಿತು. ಆದರೆ ಅವರ ಮಾತುಗಳು ಬಾಬಾ ಸಾಹೇಬರ ಮಾತಿನ ಆಶಯಕ್ಕೆ ಪೂರಕವಾಗಿಯೇ ಇದೆ ಎಂಬ ಸಂಗತಿಯನ್ನು ನಾವು ಮರೆಯಬಾರದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪ್ರಶಸ್ತಿ ಪಡೆದ ಗಣ್ಯರನ್ನು ಸನ್ಮಾನಿಸಲಾಯಿತು. ಇದರ ಜೊತೆಗೆ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮಕ್ಕಳಿಗೂ ಸಹ ನಗದು ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮಕ್ಕೆ ಶಾಸಕ ರಿಝಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಸಚಿವ ಎಚ್.ಆಂಜನೇಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
