ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗವಾದ ಕಾಗವಾಡ ಗ್ರಾಮದ ಐತಿಹಾಸಿಕ ಕಾರ ಹುಣ್ಣಿಮೆ ನೆರವೆರಿದ್ದು ಈ ಕಾರ ಹುಣ್ಣಿಮೆ ನೋಡಲು ಕರ್ನಾಟಕ ಮಹಾರಾಷ್ಟ್ರದ ಸಾವಿರಾರು ರೈತರು ಬಂದು ವೀಕ್ಷಣೆ ಮಾಡುವುದು ಒಂದು ಐತಿಹಾಸಿಕ ವಾಗಿದೆ.

ಕಾಗವಾಡ ಕಾರ ಹುಣ್ಣಿಮೆ ಯಲ್ಲಿ ಒಟ್ಟು ಮೂರು ಎತ್ತುಗಳು ಕರಿ ಹರಿಯುವುದು ವಿಶೇಷ ಇದರಲ್ಲಿ ಗೌಡರ ಮನೆತನದ ಎರಡು ಎತ್ತುಗಳು ಹಾಗೂ ಕರವ ಮನೆತನದ ಒಂದು ಎತ್ತು ಪಾಲ್ಗೊಂಡಿದ್ದವು. ಇದರಲ್ಲಿ ಕಾಗವಾಡ ಜೈನ ಸಮಾಜದ ಕರವ್ ಮನೆತನದ ಎತ್ತು ಪ್ರಥಮವಾಗಿ ಕರಿ ಹರಿಯುವಲ್ಲಿ ಯಶಸ್ವಿಯಾಗಿದೆ.
ಕಾಗವಾಡ ಪಟ್ಟಣದಲ್ಲಿ ಐತಿಹಾಸಿಕ ಕಾರಹುಣ್ಣಿಮೆಯಲ್ಲಿ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮವು ಸಾವಿರಾರು ಜನರ ಉಪಸ್ಥಿತಿಯಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಕಾರ ಹುಣ್ಣಿಮೆ ದಿನದಂದು ಬೆಳಿಗ್ಗೆಯಿಂದ ಕರವ ಮನೆತನದ ಯುವಕನೋರ್ವ ಕೈಯಲ್ಲಿ ಬಟ್ಟಲನ್ನು ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದ ಮೆರವಣಿಗೆ ಮೂಲಕ ಎಲ್ಲ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯುವ ಕಾರ್ಯಕ್ರಮ ನಡೆಯಿತು.
ಸಾಯಂಕಾಲ ಗ್ರಾಮ ಪಂಚಾಯತ ಕಾರ್ಯಾಲಯದ ಎದುರಿಗೆ 15 ಅಡಿ ಎತ್ತರದ ಮುಳ್ಳಿನ ಬನ್ನಿಯ ಕಂಟಿಯನ್ನು ಒಟ್ಟಿ ಅದರ ಮೇಲಿಂದ ಮೂರು ಎತ್ತುಗಳನ್ನು ಓಡಿಸಲಾಗುತ್ತದೆ. ಎತ್ತುಗಳಿಗೆ ಮೈತುಂಬ ಕೆಂಪು ಬಣ್ಣ ಬಳಿದು, ಎತ್ತುಗಳೊಂದಿಗೆ ನೂರಾರು ಬಲಿಷ್ಠ ಯುವಕರು ಬರಿ ಮೈಯಿಂದ ವಾದ್ಯ ವೈಭವದೊಂದಿಗೆ ಕೇ ಕೇ ಹಾಕುತ್ತಾ ಕರಿಹರಿಯುವ ಸ್ಥಳಕ್ಕೆ ಆಗಮಿಸಿ ಸ್ಪರ್ಧೆಗೆ ಅಣಿಯಾಗಿದ್ದರು.
ಪೋಲಿಸರ ಬಂದೂಕಿನಿಂದ ಸಪ್ಪಳವಾಗುತ್ತಿದ್ದಂತೆ ಮೂರು ಎತ್ತುಗಳು ನಾ ಮುಂದು, ತಾ ಮುಂದು ಎಂದು ಎತ್ತುಗಳು ಕರಿಹರಿದವು. ಯುವಕರು ತಮ್ಮ ಜೀವದ ಹಂಗು ತೊರೆದು ಪಾಲ್ಗೊಂಡಿದ್ದರು.
