• ಐತಿಹಾಸಿಕ ಬಾದಾಮಿ ಮೇಣಬಸೀದಿಯಲ್ಲಿ ಧಾರ್ಮಿಕ ಅವಮಾನ
• ಪಾದರಕ್ಷೆ ಧರಿಸಿ ಒಳಹೋದ ಪುರಾತತ್ವ ಸಿಬ್ಬಂದಿ
• ಅಧಿಕಾರಿ ವರ್ತನೆಗೆ ಪ್ರವಾಸಿ ಮಹಿಳೆ ತೀವ್ರ ಆಕ್ರೋಶ
• ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಭಾರಿ ವೈರಲ್
ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಬಾದಾಮಿಯ ಮೇಣಬಸೀದಿಯಲ್ಲಿ ಪುರಾತತ್ವ ಇಲಾಖೆಯ ಸಿಬ್ಬಂದಿಯೊಬ್ಬರು ಪಾದರಕ್ಷೆ ಧರಿಸಿ ಒಳಗೆ ಪ್ರವೇಶಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಿಬ್ಬಂದಿಯ ಈ ಬೇಜವಾಬ್ದಾರಿತನದ ವರ್ತನೆಯನ್ನು ಕಂಡು ಪ್ರವಾಸಿ ಮಹಿಳೆಯೊಬ್ಬರು ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಬಾದಾಮಿ ಚಾಲುಕ್ಯರ ರಾಜಧಾನಿಯಾಗಿದ್ದ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಪಟ್ಟಣದ ಪ್ರಸಿದ್ಧ ಪ್ರವಾಸಿ ತಾಣವಾದ ಮೇಣಬಸೀದಿಯಲ್ಲಿ ಪುರಾತತ್ವ ಇಲಾಖೆಯ ಸಿಬ್ಬಂದಿಯೇ ಪಾದರಕ್ಷೆ ಧರಿಸಿ ಒಳಗೆ ಹೋಗುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇಲಾಖೆಯ ಸಿಬ್ಬಂದಿ ರೋಷಿನಿ ಮುಸ್ತಾಫಿ ಎಂಬುವವರು ನಿಯಮ ಮೀರಿ ಚಪ್ಪಲಿ ಧರಿಸಿಕೊಂಡು ಪವಿತ್ರವಾದ ಬಸೀದಿಯ ಒಳಗಡೆ ಹೋಗಿದ್ದನ್ನು ಗಮನಿಸಿದ ಪ್ರವಾಸಿ ಮಹಿಳೆಯೊಬ್ಬರು, “ಎಲ್ಲರೂ ಗೌರವಿಸುವ ಇಂತಹ ಪವಿತ್ರ ಜಾಗಕ್ಕೆ ಚಪ್ಪಲಿ ಹಾಕಿಕೊಂಡು ಯಾಕೆ ಒಳಗಡೆ ಹೋದ್ರಿ? ಇಲ್ಲಿನ ನಿಯಮಗಳು ನಿಮಗೆ ಅನ್ವಯಿಸುವುದಿಲ್ಲವೇ? ಎಲ್ಲರೂ ಬಂದು ಮಾತನಾಡಿ” ಎಂದು ಸ್ಥಳದಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆ ಯಾವಾಗ ನಡೆದಿದೆ ಮತ್ತು ಆಕ್ಷೇಪ ವ್ಯಕ್ತಪಡಿಸಿದ ಪ್ರವಾಸಿ ಮಹಿಳೆ ಯಾರು ಎಂಬ ನಿಖರ ಮಾಹಿತಿ ಇನ್ನು ಲಭ್ಯವಾಗಿಲ್ಲವಾದರೂ, ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ಪ್ರವಾಸಿ ಮಹಿಳೆ ಇಲಾಖೆಯ ಸಿಬ್ಬಂದಿಯನ್ನು ಪ್ರಶ್ನಿಸುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ.

