Belagavi

ಇರಾನ್ ಮಲ್ಲನನ್ನು ಶೆಡ್ಡು ಹೊಡೆದು ಮಣಿಸಿದ ಪೃಥ್ವಿರಾಜ್ ಪಾಟೀಲ್ ಮುಚ್ಚಂಡಿ ಅಖಾಡದಲ್ಲಿ ಜಗಜಟ್ಟಿಗಳ ಭಾರಿ ಕಾಳಗ!!

Share

• ಶ್ರೀ ಸಿದ್ದೇಶ್ವರರ ಸನ್ನಿಧಿಯಲ್ಲಿ ಅದ್ಧೂರಿ ಕುಸ್ತಿ ಪಂದ್ಯಾವಳಿ
• ಇರಾನ್ ಮಲ್ಲನಿಗೆ ಶೆಡ್ಡು ಹೊಡೆದ ಪೃಥ್ವಿರಾಜ್ ಪಾಟೀಲ್
• ಮಳೆಗೆ ಸಡ್ಡು ಹೊಡೆದ ಕುಸ್ತಿ ಪ್ರೇಮಿಗಳು
• ರೋಮಾಂಚನಕಾರಿ ಪಂದ್ಯದಲ್ಲಿ ಪ್ರಶಾಂತ್‌ಗೆ ಭರ್ಜರಿ ಜಯ

ಮಳೆಯ ಆತಂಕದ ನಡುವೆಯೂ ಮುಚ್ಚಂಡಿಯ ಗ್ರಾಮದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಅಂತರರಾಷ್ಟ್ರೀಯ ಕುಸ್ತಿ ಹಬ್ಬದಲ್ಲಿ ಮಹಾರಾಷ್ಟ್ರ ಕೇಸರಿ ಪೃಥ್ವಿರಾಜ್ ಪಾಟೀಲ್ ಇರಾನ್‌ನ ಬಲದಂಡ ಮಲ್ಲನನ್ನು ಮಣಿಸಿ ಐತಿಹಾಸಿಕ ಜಯ ಸಾಧಿಸಿದ್ದಾರೆ. ಕಣದಲ್ಲಿದ್ದ ಘಟಾನುಘಟಿ ಮಲ್ಲರ ರೋಮಾಂಚನಕಾರಿ ಕಾದಾಟದ ಕಣ್ಣಿಗೆ ಕಟ್ಟುವಂತಹ ವರದಿ ಇಲ್ಲಿದೆ ನೋಡಿ.

ಬೆಳಗಾವಿ ತಾಲೂಕಿನ ಮುಚ್ಚಂಡಿಯ ಸಿದ್ದೇಶ್ವರ ದೇವಸ್ಥಾನದ ಮೈದಾನದಲ್ಲಿ ಶ್ರೀ ಮಹಾಲಕ್ಷ್ಮೀ- ಶ್ರೀ ಮರಗಾಯಿ ಯಾತೋತ್ಸವದ ಅಂಗವಾಗಿ ಭವ್ಯ ಅಂತರರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಅಂತಿಮ ಹಂತದ ಅತ್ಯಂತ ರೋಚಕ ಕಾದಾಟದಲ್ಲಿ ಮಹಾರಾಷ್ಟ್ರ ಕೇಸರಿ ಪೃಥ್ವಿರಾಜ್ ಪಾಟೀಲ್ ಕೊಲ್ಲಾಪುರ ಮತ್ತು ಇರಾನ್‌ನ ಅಂತರರಾಷ್ಟ್ರೀಯ ಮಲ್ಲ ಇರ್ಫಾನ್ ಮುಖಾಮುಖಿಯಾಗಿದ್ದರು. ಬರೋಬ್ಬರಿ 32 ನಿಮಿಷಗಳ ಕಾಲ ನಡೆದ ಈ ತೀವ್ರ ಪೈಪೋಟಿಯಲ್ಲಿ ಇಬ್ಬರೂ ಮಲ್ಲರು ಪರಸ್ಪರ ಸಡ್ಡು ಹೊಡೆದರು. ಕೊನೆಗೆ ಹೊಸ ನಿಯಮಾವಳಿಗಳ ಪ್ರಕಾರ ಟಾಸ್ ನಡೆಸಿ ಇಬ್ಬರಿಗೂ ತಲಾ ಎರಡು ನಿಮಿಷಗಳ ಕಾಲ ಹಿಡಿತ ಸಾಧಿಸಲು ಅವಕಾಶ ನೀಡಲಾಯಿತು. ಈ ವೇಳೆ ಪೃಥ್ವಿರಾಜ್ ಪಾಟೀಲ್ ಅವರು ಅತ್ಯಂತ ಚಾಣಾಕ್ಷತನದಿಂದ ಇರ್ಫಾನ್ ಅವರ ವಿರುದ್ಧ ‘ಬ್ಯಾಕ್ ಥ್ರೋ’ ನಡೆಸಿ ಆಕಾಶ ತೋರಿಸುವ ಮೂಲಕ ನೆರೆದಿದ್ದ ಸಹಸ್ರಾರು ಕುಸ್ತಿ ಅಭಿಮಾನಿಗಳ ಮನ ಗೆದ್ದರು. ಎರಡನೇ ಕ್ರಮಾಂಕದ ಕುಸ್ತಿಯಲ್ಲಿ ಪ್ರಶಾಂತ್ ಶಿಂಧೆ ಅವರು ಕೇವಲ 8ನೇ ನಿಮಿಷದಲ್ಲಿ ವೀರೇಂದ್ರಕುಮಾರ್ ಅವರನ್ನು ‘ಏಕಲಂಗಿ’ ಮತ್ತು ‘ಏಕೇರಿ ಹಾತ್’ ಮೂಲಕ ಚೀತ್ ಮಾಡಿದರು.
ಮೂರನೇ ಕ್ರಮಾಂಕದ ಕುಸ್ತಿಯಲ್ಲಿ ಕರ್ನಾಟಕ ಕಂಠೀರವ ಕೇಸರಿ ಕಾಮೇಶ್ ಪಾಟೀಲ್ (ಕಂಗ್ರಾಳಿ) ಅವರು 16ನೇ ನಿಮಿಷದಲ್ಲಿ ಕೊಲ್ಲಾಪುರದ ಸೂರಜ್ ಮುಂಡೆ ಅವರ ಮೇಲೆ ‘ಘುಟ್ಣಾ’ ದಾವ್ ಬಳಸಿ ವಿಜಯಶಾಲಿಯಾದರು. ನಾಲ್ಕನೇ ಪಂದ್ಯದಲ್ಲಿ ಕರ್ನಾಟಕ ಚಾಂಪಿಯನ್ ಪ್ರಕಾಶ್ ಇಂಗಳಗಿ ಅವರು ಸಾಂಗ್ಲಿಯ ಮನೋಜ್ ಪಾಟೀಲ್ ವಿರುದ್ಧ ‘ನಾಕಪಟ್ಟಿ’ ದಾವ್ ಹಾಕಿ ಗೆದ್ದರೆ, ಪ್ರೇಮ್ ಜಾಧವ್ ಮತ್ತು ಅಕ್ಷಯ್ ಚೌಗುಲೆ ನಡುವಿನ ಪಂದ್ಯವು ತೀವ್ರ ಹೋರಾಟದ ನಂತರ ಅಕ್ಷಯ್ ಅವರ ಗಾಯದ ಕಾರಣ ಸಮಬಲದಲ್ಲಿ ಅಂತ್ಯಗೊಂಡಿತು. ಉಳಿದಂತೆ ಸಚಿನ್ ಶಿರಗುಪ್ಪಿ, ಸಾತಾಪ್ಪ ಕೊಲ್ಲಾಪುರ, ಕಾರ್ತಿಕ್ ಇಂಗಳಗಿ, ಬಬ್ಲು ನರಳೆ, ವಿನಾಯಕ್ ಯೆಳ್ಳೂರ್, ಸಂಭಾಜಿ ಪರಮೋಜಿ (ಕಾಕತಿ), ಪಿಲ್ಲಾ ಕೊಲ್ಲಾಪುರ, ರಾಮದಾಸ್ ಮೋಳೆರಾಖಿ ಕಾಕತಿ, ಮಹಾಂತೇಶ್ ಸಂತೀಬಸ್ತವಾಡ್, ಸುಫಿಯಾನ್ ಸಯ್ಯದ್, ಪ್ರಣವ್ ಉಚಗಾಂವ್, ಮಂಥನ್ ತಿಪ್ಪಣ್ಣಾಚೆ ಸಾವ್ರಾ, ಹರಿಷ್ ಮಸ್ತಿಹೋಳಿ, ಕರಣ್ ಖಾದರವಾಹಿ, ಸಂಗ್ರಾಮ್ ಗಾವಡಾ, ಅಫಾನ್ ಮಜಗಾಂವ್, ಸಿದ್ದಾರ್ಥ್ ಕಾಕತ್ಕರ್ ಮಜಗಾಂವ್, ಸ್ವರಾಜ್ ಸಾವಗಾಂವ್, ಪ್ರಥಮೇಶ್ ಬಕುಂದ್ ಮತ್ತು ಪ್ರತೀಕ್ ಗಣೇಶ್‌ಪುರ್ ಹಾಗೂ ಓಂಕಾರ್ ಪೂಜಾರಿ, ಪ್ರವೀಣ್ ಗಂದಿಗವಾಡ್ ಮುಂತಾದ ಮಲ್ಲರು ಭರ್ಜರಿ ಪ್ರದರ್ಶನ ನೀಡಿದರು. ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯ ಆತಂಕದ ನಡುವೆಯೂ ಕಮಿಟಿಯ ತರಾತುರಿಯ ಸಿದ್ಧತೆ ಮತ್ತು ಕೃಷ್ಣಕಾಂತ್ ಚೌಗುಲೆ (ರಾಶಿವಾಡೆ), ಅಮೋಲ್ ನಿಪಾಣಿ ಅವರ ರಣಹಲಗೆಯ ತಾಳದ ಅದ್ಭುತ ಸಮಲೋಚನೆಯು ಕುಸ್ತಿ ಪ್ರೇಮಿಗಳನ್ನು ಮೈದಾನದಲ್ಲೇ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.
ಶಿವಪ್ಪ ಜೊಂಧಳೆ ಹಾಗೂ ಬಾಳಾರಾಮ್ ಪಾಟೀಲ್ ಅವರ ನೇತೃತ್ವದ ಸಮಿತಿಯೊಂದಿಗೆ ವಿಶ್ವನಾಥ್ ಪಾಟೀಲ್, ಶಿವಾಜಿ ಪಾಟೀಲ್, ಅತುಲ್ ಶಿರೋಳೆ, ಗಣಪತ್ ಬನೋಶಿ, ಬಾಹುಬಲಿ ಬಸ್ತವಾಡ್, ರಾಜು ಮಜಗಾಂವ್, ಪರಶುರಾಮ್ ಮೊದಗೇಕರ್, ಪೀರಾಜಿ ಮುಚಂಡಿಕರ್, ಗಂಗಾರಾಮ್ ಬಾಳೇಕುಂದ್ರಿ ಹಾಗೂ ಬಾಬು ಕಲ್ಲೇಹೋಳ್ ಅವರು ಪಂಚರಾಗಿ ಅತ್ಯಂತ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದರು.

Tags:

error: Content is protected !!