ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರು ದಿನಗಳ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ ಇಂದಿನಿಂದ ಬೆಳಗಾವಿಯಲ್ಲಿ ಆರಂಭಗೊಂಡಿದೆ. ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ನೇತೃತ್ವದಲ್ಲಿ ಈ ಉನ್ನತ ಮಟ್ಟದ ಸಭೆ ಆರಂಭವಾಗಿದ್ದು, ಈಗಾಗಲೇ ನಡೆದು ಮುಕ್ತಾಯಗೊಂಡಿರುವ ಸಂಘದ ಪ್ರಶಿಕ್ಷಣ ವರ್ಗಗಳ ವೃತ್ತಾಂತದ ಕುರಿತು ಮೊದಲ ದಿನವೇ ವಿಸ್ತೃತ ಚರ್ಚೆ ಕೈಗೆತ್ತಿಕೊಳ್ಳಲಾಗಿದೆ.


ಬೆಳಗಾವಿಯ ಅನಗೋಳ ಸಂತ ಮೀರಾ ಶಾಲೆಯಲ್ಲಿ ಇಂದಿನಿಂದ ಆರಂಭವಾಗಿರುವ ಈ ಪ್ರಮುಖ ಬೈಠಕ್ನಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಲ್ಲಾ ಸಹಸರಕಾರ್ಯವಾಹರು, ಕಾರ್ಯವಿಭಾಗಗಳ ಅಖಿಲ ಭಾರತೀಯ ಪ್ರಮುಖರು, ಸಹ ಪ್ರಮುಖರು ಹಾಗೂ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದಾರೆ. ಇವರೊಂದಿಗೆ ಕ್ಷೇತ್ರೀಯ ಪ್ರಚಾರಕರು, ಸಹ ಕ್ಷೇತ್ರೀಯ ಪ್ರಚಾರಕರು, ದೇಶದ ಎಲ್ಲಾ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು ಹಾಗೂ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಇಂದಿನ ಮೊದಲ ದಿನದ ಸಭೆಯಲ್ಲಿ, ಮಾರ್ಚ್ 2026ರ ನಂತರ ವಿವಿಧ ಹಂತಗಳಲ್ಲಿ ಈಗಾಗಲೇ ಸಂಪನ್ನಗೊಂಡಿದ್ದ ಸಂಘದ ಪ್ರಶಿಕ್ಷಣ ವರ್ಗಗಳ ವೃತ್ತಾಂತ ಹಾಗೂ ಶಾಖೆಯ ವಿವಿಧ ಹಂತದ ಕಾರ್ಯಯೋಜನೆಯ ಕ್ರಿಯಾನ್ವಯದ ದೃಷ್ಟಿಯಿಂದ ವಿಸ್ತಾರವಾದ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಬೈಠಕ್ನಲ್ಲಿ ಸಂಘ ಶತಾಬ್ದಿಯ ನಿಮಿತ್ತ ಈಗಾಗಲೇ ದೇಶಾದ್ಯಂತ ನಡೆದಿದ್ದ ಶಾಖಾ ಕಾರ್ಯವಿಸ್ತಾರದ ಕುರಿತು ಸಿದ್ಧಪಡಿಸಲಾದ ವರದಿಗಳನ್ನು ಪರಿಶೀಲಿಸಲಾಗುತ್ತಿದ್ದು, ಮುಂದಿನ ಶಾಖಾ ವಿಸ್ತಾರದ ಯೋಜನೆಗಳ ಕುರಿತು ಗಂಭೀರ ಚಿಂತನೆ ನಡೆದಿದೆ. ಇದರೊಂದಿಗೆ ಸಂಘ ಶತಾಬ್ದಿಯ ನಿಮಿತ್ತ ಇದುವರೆಗೆ ಸಂಪನ್ನಗೊಂಡಿರುವ ಕಾರ್ಯಕ್ರಮಗಳ ವರದಿ ಮತ್ತು ಇನ್ನುಳಿದ ನಿರ್ಧಾರಿತ ಕಾರ್ಯಕ್ರಮಗಳ ಯೋಜನೆಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಮುಖ್ಯವಾಗಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ 2026-27ರ ಪ್ರವಾಸದ ಯೋಜನೆಗೆ ಸಂಬಂಧಿಸಿದ ವಿಷಯಗಳೂ ಸಭೆಯ ಕಾರ್ಯಸೂಚಿಯಲ್ಲಿದ್ದು, ಸಂಘ ಶತಾಬ್ದಿಯ ಉಳಿದ ಕಾರ್ಯಕ್ರಮಗಳು ಮುಂದಿನ ವಿಜಯದಶಮಿ ಉತ್ಸವದ ವರೆಗೆ ನಿರಂತರವಾಗಿ ನಡೆಯಲಿವೆ ಎಂದು ತಿಳಿದುಬಂದಿದೆ.
