ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಬೆಳಗಾವಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದರು.

ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಬಾಗಿಲಿಗೆ ಸೇವೆ ತಲುಪಿಸಲು ‘ಪ್ರಜಾಸೇವೆ’ ಎಂಬ ನೂತನ ಇಲಾಖೆ ಸ್ಥಾಪನೆಗೆ ಸಿಎಂ ಚಿಂತನೆ ನಡೆಸಿದ್ದು, ಗ್ರಾಪಂ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಲು ಸೂಚಿಸಿದ್ದಾರೆ. ಇನ್ನು ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಗಾಗಿ ಸಿಎಸ್ಆರ್ ಫಂಡ್ ಬಳಸಿ ಪ್ರತಿ ಶಾಲೆಗೆ 6 ರಿಂದ 8 ಕೋಟಿ ರೂ. ಅನುದಾನ ಒದಗಿಸುವ ಯೋಜನೆ ರೂಪಿಸಲಾಗಿದ್ದು, ಅಥಣಿ ಕ್ಷೇತ್ರಕ್ಕೆ ಈಗಾಗಲೇ 10 ಕೆಪಿಎಸ್ಸಿ ಶಾಲೆಗಳು ಮಂಜೂರಾಗಿವೆ. ಬರ, ಕುಡಿಯುವ ನೀರು ಹಾಗೂ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ನೈಜ ವರದಿ ನೀಡುವಂತೆ ಸಿಎಂ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ ಎಂದು ಸವದಿ ವಿವರಿಸಿದರು.
ಇದೇ ವೇಳೆ ಗೃಹಲಕ್ಷ್ಮಿ ಯೋಜನೆ ಕುರಿತು ಮಾತನಾಡಿದ ಲಕ್ಷ್ಮಣ ಸವದಿ, ಕೆಲವು ಕಡೆ ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುತ್ತಿರುವುದು ಮತ್ತು ಕೆಲವರು ಎರಡು ಬಾರಿ ಹಣ ಡ್ರಾ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಯೋಜನೆಯ ಹಣ ದುರುಪಯೋಗವಾಗುತ್ತಿರುವುದನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗುತ್ತಿದ್ದು, ಫಲಾನುಭವಿಗಳ ಸಂಪೂರ್ಣ ಪರಿಶೀಲನಾ ಕಾರ್ಯ ಮುಗಿದ ತಕ್ಷಣವೇ ಎಲ್ಲ ಅರ್ಹರಿಗೂ ಬಾಕಿ ಉಳಿದಿರುವ ಕಂತಿನ ಹಣ ಒಟ್ಟಿಗೆ ಜಮೆಯಾಗಲಿದೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು. ಇನ್ನು ಬೆಳಗಾವಿ ಡಿನ್ನರ್ ಮೀಟಿಂಗ್‌ನಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇನ್ನು ಒಂದು ವಾರದೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ ಎಂಬ ಮಹತ್ವದ ಸುಳಿವು ನೀಡಿದರು.
