Khanapur

ಖಾನಾಪೂರ: ತಹಸೀಲ್ದಾರ್ ದರ್ಪಕ್ಕೆ ಪಿಡಿಒಗಳು ಹೈರಾಣು; ಪಿಡಿಒಗಳ ಮೇಲೆ ಅವಾಚ್ಯ ನಿಂದನೆ!

Share

ಖಾನಾಪೂರ ತಾಲೂಕು ಕಚೇರಿಯಲ್ಲಿ ನಡೆದ ಚುನಾವಣಾ ಸಭೆಯು ತಹಸೀಲ್ದಾರರ ದರ್ಪದ ವರ್ತನೆಯಿಂದಾಗಿ ರಣರಂಗವಾಗಿ ಮಾರ್ಪಟ್ಟಿದೆ. ಪ್ರಶ್ನೆ ಕೇಳಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (PDO) ಮೇಲೆ ತಹಸೀಲ್ದಾರರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾದ ಘಟನೆ ತಾಲೂಕಿನಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಖಾನಾಪೂರ ತಹಸೀಲ್ದಾರ್ ಕಚೇರಿಯಲ್ಲಿ ಇಂದು ಜುಲೈ 9 ರಂದು ಹಮ್ಮಿಕೊಳ್ಳಲಾಗಿದ್ದ ಮುಂಬರುವ ಎಲೆಕ್ಷನ್ ಸಂಬಂಧಿತ ಪೂರ್ವಸಿದ್ಧತಾ ಸಭೆಯಲ್ಲಿ ಈ ಹೈಡ್ರಾಮಾ ನಡೆದಿದೆ. ಸಭೆಯ ಕಾರ್ಯಸೂಚಿಗೆ ಸಂಬಂಧಿಸಿದಂತೆ ತಾಲೂಕಿನ ಪಿಡಿಒಗಳು ಹಾಗೂ ಡೇಟಾ ಎಂಟ್ರಿ ಆಪರೇಟರ್‌ಗಳು ಕೆಲವು ಅಗತ್ಯ ಸ್ಪಷ್ಟನೆ ಮತ್ತು ಸಂದೇಹಗಳನ್ನು ಕೇಳಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ತಹಸೀಲ್ದಾರರು, “ಯಾರೂ ಪ್ರಶ್ನೆ ಕೇಳಬಾರದು, ನಾವು ಹೇಳಿದ್ದನ್ನು ಮಾತ್ರ ಕೇಳಬೇಕು” ಎಂದು ಅಧಿಕಾರ ಚಲಾಯಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ, ತಹಸೀಲ್ದಾರರು ತಮ್ಮ ಘನತೆಯನ್ನು ಮರೆತು ಇಡೀ ಸಭೆಯಲ್ಲಿದ್ದ ಸಿಬ್ಬಂದಿಯನ್ನು ಅತ್ಯಂತ ಅಸಭ್ಯ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.

ತಹಸೀಲ್ದಾರರ ಈ ಗೂಂಡಾ ವರ್ತನೆ ಮತ್ತು ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ‘ಬಿ’ ಗ್ರೇಡ್ ಸಂಘದ ನೇತೃತ್ವದಲ್ಲಿ ಅಧಿಕಾರಿಗಳು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನೊಂದ ಅಧಿಕಾರಿ ಬಾಲರಾಜ್ ಭಜಂತ್ರಿ, “ನಾವು ಕೆಲಸ ಮಾಡಲು ಸಿದ್ಧರಿದ್ದೇವೆ, ಆದರೆ ತಹಸೀಲ್ದಾರರು ನಮ್ಮ ಮೇಲೆ ಏರಿ ಬಂದು ಅವಾಜ್ ಹಾಕಿ ಮಾನಸಿಕವಾಗಿ ಕುಗ್ಗಿಸಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದಾರೆ. ಸದ್ಯ ತಹಸೀಲ್ದಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವವರೆಗೂ ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿರುವ ಸಂಘದ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ ನ್ಯಾಯಕ್ಕೆ ಆಗ್ರಹಿಸಿದ್ದಾರೆ.

ಈ ಘಟನೆಯ ವಿಡಿಯೋ ತುಣುಕುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

Tags:

error: Content is protected !!