ಸರಕಾರವನ್ನು ಜನರು ಹುಡುಕಬಾರದು, ಜನರ ಬಳಿಯೇ ಸರಕಾರ ಇರಬೇಕು ಎಂಬುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಜರುಗಿದ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರನ್ನು ಕಚೇರಿಗಳಿಗೆ ಅಲೆಸುವುದನ್ನು ನಿಲ್ಲಿಸಿ, ಹೊಸ ಆಲೋಚನೆಯೊಂದಿಗೆ ಕರ್ತವ್ಯ ನಿರ್ವಹಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.


2ನೇ ರಾಜಧಾನಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, ಜಿಲ್ಲಾಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು. ಜನರನ್ನು ಕಚೇರಿಗಳಿಗೆ ಅಲೆಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದ ಅವರು, ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ‘ಪ್ರಜಾಸೇವಾ ಇಲಾಖೆ’ ಆರಂಭಿಸಲಾಗಿದ್ದು, ಇದಕ್ಕೆ ಪ್ರತ್ಯೇಕ ಸಚಿವರನ್ನು ನಿಯೋಜಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಆಯ್ದ ತಾಲ್ಲೂಕುಗಳಲ್ಲಿ ಜನಸಂಪರ್ಕ ಸಭೆ ನಡೆಸಿ, ಕಾನೂನು ಚೌಕಟ್ಟಿನೊಳಗೆ ಜನರ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ ಗ್ರಾಮೀಣ ಭಾಗದ ಜನರ ವಲಸೆ ತಡೆಯಲು ಸಿ.ಎಸ್.ಆರ್. ನೀತಿಯಡಿ 8,000 ಕೋಟಿ ರೂ. ವೆಚ್ಚದಲ್ಲಿ ಮೂರು ಪಂಚಾಯಿತಿಗಳಿಗೆ ಒಂದರಂತೆ 2,000 ಅತ್ಯಾಧುನಿಕ ಸರ್ಕಾರಿ ಶಾಲೆಗಳನ್ನು ನಿರ್ಮಿಸುವ ಐತಿಹಾಸಿಕ ಗುರಿ ಹೊಂದಲಾಗಿದೆ ಎಂದು ಸಿಎಂ ಪ್ರಕಟಿಸಿದರು. ದೇಶದ ಸಮಗ್ರತೆಗಾಗಿ ಪ್ರತಿ ಪಂಚಾಯಿತಿಯಲ್ಲಿ ‘ಭಾರತ ಜೋಡೋ ಯುವಕ ಸಂಘ’ ಸ್ಥಾಪಿಸಿ 10 ಲಕ್ಷ ರೂ. ನೀಡಲಾಗುವುದು ಹಾಗೂ ಪ್ರತಿ ಕ್ಷೇತ್ರದಲ್ಲಿ ಬಡವರಿಗೆ 5 ರಿಂದ 10 ಸಾವಿರ ನಿವೇಶನ ಒದಗಿಸಲಾಗುವುದು ಎಂದರು. ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿಲ್ಲ ಎಂದು ಸ್ಪಷ್ಟಪಡಿಸಿ, ಮಳೆ ಕೊರತೆ ಹಿನ್ನೆಲೆ ಕುಡಿಯುವ ನೀರು ಹಾಗೂ ಮೇವಿನ ಕಿಟ್ ಒದಗಿಸಲು ಸೂಚಿಸಿದರು

ಇದಕ್ಕೂ ಮುನ್ನ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ಸುವರ್ಣಸೌಧಕ್ಕೆ
ಆಗಮಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರು ಮೊದಲಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಉತ್ತರ
ದ್ವಾರದಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು
ಪುಷ್ಪಾರ್ಚನೆ ಮಾಡಿದರು. ನಂತರ ಸುವರ್ಣಸೌಧದಲ್ಲಿರುವ ಮುಖ್ಯಮಂತ್ರಿಗಳ
ಕೊಠಡಿಯಲ್ಲಿ ಪೂಜೆಯನ್ನು ಸಲ್ಲಿಸಿ, ನಂತರ 2ನೇ ರಾಜಧಾನಿ ಬೆಳಗಾವಿಯಲ್ಲಿ ಅಧಿಕಾರ ವಹಿಸಿಕೊಂಡು, ತಮ್ಮ
ಕಾರ್ಯಾರಂಭಿಸಿದರು.

ಈ ವೇಳೆ ಸಚಿವರಾದ ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ, ಯು.ಟಿ.ಖಾದರ್, ಈಶ್ವರ ಖಂಡ್ರೆ, ಶಾಸಕರಾದ ಎಚ್.ಕೆ.ಪಾಟೀಲ, ಲಕ್ಷ್ಮಣ ಸವದಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಹಲವು ಶಾಸಕರು, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಸೇರಿದಂತೆ ಉಪಸ್ಥಿತರಿದ್ದರು.
