Kagawad

ಕಾಗವಾಡ: ನಕಲಿ ಜಾತಿ ಪ್ರಮಾಣ ಪತ್ರ ರದ್ದತಿಗೆ ಆಗ್ರಹಿಸಿ ವಾಲ್ಮೀಕಿ ಸಮಾಜದಿಂದ ತಹಶೀಲ್ದಾರ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ

Share

ತಾಲೂಕಿನಲ್ಲಿ ಅರ್ಹರಲ್ಲದ ಇತರ ಜಾತಿಗೆ ಸೇರಿದ ಜನರಿಗೆ ನೀಡಿರುವ ನಕಲಿ ಪರಿಶಿಷ್ಟ ಪಂಗಡ (ST) ಜಾತಿ ಪ್ರಮಾಣ ಪತ್ರಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಾಗವಾಡ ತಾಲೂಕು ವಾಲ್ಮೀಕಿ ಸಮಾಜ ಮಹಾಸಭೆಯ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಬೆಳಿಗ್ಗೆಯಿಂದ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಯಿತು.

ಸಂವಿಧಾನದ ಪರಿಶಿಷ್ಟ ವರ್ಗಗಳ ಪಟ್ಟಿಯ ಕ್ರ.ಸಂ. 38 ರ ನಾಯ್ಕಡ, ನಾಯಕ, ಬೇಡರ ಹಾಗೂ ವಾಲ್ಮೀಕಿ ಜಾತಿಯ ಪರ್ಯಾಯ ಪದಗಳಾದ ‘ತಳವಾರ’ ಮತ್ತು ‘ಪರಿವಾರ’ ಜಾತಿಗೆ ಮಾತ್ರ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ವಿತರಿಸುವಂತೆ ಸರ್ಕಾರದಿಂದ ಸ್ಪಷ್ಟ ಆದೇಶವಿದೆ. ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರ ಉಲ್ಲೇಖ 2 ಮತ್ತು 3 ರ ಆದೇಶದಂತೆ, ಪ್ರವರ್ಗ-1 ರಲ್ಲಿ ಬರುವ ಕೋಳಿ/ಕೋಲ, ಅಂಬಿಗ, ಕಬ್ಬಲಿಗ ಹಾಗೂ ಗಂಗಾಮತಸ್ಥ ಸಮುದಾಯದ ತಳವಾರರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡ (ST) ಪ್ರಮಾಣ ಪತ್ರವನ್ನು ವಿತರಿಸಬಾರದು ಎಂದು ತಿಳಿಸಲಾಗಿದೆ.

ಆದರೆ, ಪ್ರವರ್ಗ-1 ರ ಜಾತಿ ಪಟ್ಟಿಯಲ್ಲಿರುವ ಕೋಳಿ, ಅಂಬಿಗ, ಕಬ್ಬಲಿಗ ಹಾಗೂ ಗಂಗಾಮತಸ್ಥ ಸಮುದಾಯದ ತಳವಾರರು ಸುಳ್ಳು ಮಾಹಿತಿಯನ್ನು ನೀಡಿ, ಪರಿಶಿಷ್ಟ ಪಂಗಡದ ತಳವಾರ ಮತ್ತು ಪರಿವಾರ ಜಾತಿಗೆ ಮಾತ್ರ ಸಿಗಬೇಕಾದ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ಅಥಣಿ, ರಾಯಭಾಗ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳಲ್ಲಿ ಇಂತಹ ನಕಲಿ ಪ್ರಮಾಣ ಪತ್ರಗಳನ್ನು ಪಡೆದು ನಿಜವಾದ ಪರಿಶಿಷ್ಟ ಪಂಗಡದ ಜನರಿಗೆ ಮೋಸ ಹಾಗೂ ವಂಚನೆ ಮಾಡಲಾಗುತ್ತಿದೆ ಎಂದು ಸಮಾಜದ ಮುಖಂಡರು ಆರೋಪಿಸಿದರು.

ಸಮಾಜದ ಪ್ರಮುಖ ಬೇಡಿಕೆಗಳು:

ಪ್ರವರ್ಗ-1 ರಲ್ಲಿ ಬರುವ ಕೋಳಿ, ಅಂಬಿಗ, ಕಬ್ಬಲಿಗ ಹಾಗೂ ಗಂಗಾಮತಸ್ಥ ಸಮುದಾಯದ ತಳವಾರರು ಸುಳ್ಳು ಮಾಹಿತಿ ನೀಡಿ ಪಡೆದಿರುವ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಆ ಪ್ರಮಾಣ ಪತ್ರಗಳನ್ನು ರದ್ದುಪಡಿಸಬೇಕು.

ನೈಜ ಪರಿಶಿಷ್ಟ ಪಂಗಡದ (ಕ್ರ.ಸಂ. 38 ರ ನಾಯ್ಕಡ, ನಾಯಕ ಪರ್ಯಾಯ ಪದ) ತಳವಾರ ಮತ್ತು ಪರಿವಾರದವರಿಗೆ ಮಾತ್ರ ST ಪ್ರಮಾಣ ಪತ್ರ ನೀಡಿ, ಪ್ರವರ್ಗ-1 ರ ತಳವಾರರಿಗೆ ST ಪ್ರಮಾಣ ಪತ್ರ ವಿತರಿಸದಂತೆ ಕ್ರಮ ವಹಿಸಬೇಕು.

ಈ ಕುರಿತು ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕಿನ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ರಮೇಶ್ ನಾಯಕ್ ಹಾಗೂ ನ್ಯಾಯವಾದಿ ಪ್ರವೀಣ ಕೆಂಪ್ವಾಡೆ ಅವರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಗ್ರೇಡ್-2 ತಹಶೀಲ್ದಾರ್ ಶ್ರೀಮತಿ ರಶ್ಮಿ ಜಕಾತೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ನಂತರ ಮಾತನಾಡಿ, “ಮೇಲಾಧಿಕಾರಿಗಳು ನಿಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಇದರ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಬೇರೆ ತಾಲೂಕಿನ ಅಧಿಕಾರಿಗಳನ್ನು ತನಿಖೆಗೆ ನೇಮಕ ಮಾಡಲಾಗಿದೆ. ಶೀಘ್ರದಲ್ಲಿಯೇ ಈ ವಿಷಯ ಕುರಿತು ಸೂಕ್ತ ತನಿಖೆಯಾಗಿ ನ್ಯಾಯಯುತ ನಿರ್ಧಾರ ಬರಲಿದೆ. ಆದ್ದರಿಂದ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಬೇಕು” ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಅಣ್ಣಾಸಾಹೇಬ್ ಕೋರೆ ಹಾಗೂ ವಾಲ್ಮೀಕಿ ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!