Kagawad

ವಿಕ ಎಕ್ಸಲೆನ್ಸ್ ಅಂಡ್ ಅನರ್ ಗೌರವಕ್ಕೆ ಜ್ಯೋತಿಕುಮಾರ್ ಪಾಟೀಲ್ ಭಾಜನ

Share

ಕಾಗವಾಡದ ವಿದ್ಯಾವರ್ಧಕ ಶಿಕ್ಷಣ ಸಮಿತಿಯ ಚೇರ್ಮನ್ ಹಾಗೂ ದತ್ತ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಜ್ಯೋತಿಕುಮಾರ್ ಸಿದ್ದಗೌಡ ಪಾಟೀಲ್ ಅವರಿಗೆ ಟೈಮ್ಸ್ ಆಫ್ ಇಂಡಿಯಾ ಹಾಗೂ ವಿಜಯ ಕರ್ನಾಟಕ ಸಂಸ್ಥೆಗಳ ವತಿಯಿಂದ ನೀಡಲಾಗುವ ‘ವಿಕ ಎಕ್ಸಲೆನ್ಸ್ ಅಂಡ್ ಅನರ್’ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಬೆಂಗಳೂರಿನ ಹೋಟೆಲ್ ತಾಜ್‌ನಲ್ಲಿ ರವಿವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಅರಣ್ಯ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಜ್ಯೋತಿಕುಮಾರ್ ಪಾಟೀಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ನಟ ಅಜಯ್ ರಾವ್, ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಮಿರರ್ ಸಂಪಾದಕ ದೀಪಕ್ ಸಲೂಲ, ಕರ್ನಾಟಕ ಸರ್ಕಾರದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಹಾಗೂ ವಿಜಯ ಕರ್ನಾಟಕ ಸಂಪಾದಕ ಸುದರ್ಶನ್ ಜನಿಂಗನಹಳ್ಳಿ ಉಪಸ್ಥಿತರಿದ್ದರು.

ಜ್ಯೋತಿಕುಮಾರ್ ಪಾಟೀಲ್ ಅವರ ಪರವಾಗಿ ಅವರ ಧರ್ಮಪತ್ನಿ ಶಿಲ್ಪಾ ಜ್ಯೋತಿಕುಮಾರ್ ಪಾಟೀಲ್ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಗವಾಡದ ಆತ್ಮೀಯರಾದ ಡಾ. ಅನಿಲ್ ಪಾಟೀಲ್, ಬಾಳಸಾಹೇಬ್ ಕಲ್ಲೋಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಗವಾಡ ವಿದ್ಯಾವರ್ಧಕ ಶಿಕ್ಷಣ ಸಮಿತಿಯನ್ನು ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರು ಸ್ಥಾಪಿಸಿದರು. ಬಳಿಕ ನಡೆದಾಡುವ ದೇವರು ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಉಭಯ ಸ್ವಾಮೀಜಿಗಳು ಸಂಸ್ಥೆಯ ಚೇರ್ಮನ್‌ರಾಗಿ ಸೇವೆ ಸಲ್ಲಿಸಿದ್ದಾರೆ. ದಿವಂಗತ ಸಿದ್ದಗೌಡ ಪಾಟೀಲ್ ಅವರು ಚೇರ್ಮನ್‌ರಾಗಿ ಸಂಸ್ಥೆಯ ಅಭಿವೃದ್ಧಿಗೆ ಸೇವೆ ಸಲ್ಲಿಸಿದ್ದು, ಸದ್ಯ ಜ್ಯೋತಿಕುಮಾರ್ ಪಾಟೀಲ್ ಅವರು ಚೇರ್ಮನ್ ಆಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ವಿದ್ಯಾವರ್ಧಕ ಶಿಕ್ಷಣ ಸಮಿತಿಯು ಏಳು ಅಂಗಶಾಖೆಗಳನ್ನು ಹೊಂದಿದ್ದು, ನೂರಾರು ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಗಡಿ ಭಾಗದಲ್ಲಿ ಆದರ್ಶ ಶಿಕ್ಷಣ ಸಂಸ್ಥೆಯಾಗಿ ಹೆಸರು ಗಳಿಸಿರುವ ಸಂಸ್ಥೆಯ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಜ್ಯೋತಿಕುಮಾರ್ ಪಾಟೀಲ್ ಅವರಿಗೆ ‘ವಿಕ ಎಕ್ಸಲೆನ್ಸ್ ಅಂಡ್ ಅನರ್’ ಗೌರವ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

Tags:

error: Content is protected !!