ಇಂದಿನ ವಿಜ್ಞಾನ ಯುಗದ ಹೆಸರಿನಲ್ಲಿ ಅನೇಕ ಕುಟುಂಬದವರು ತಮ್ಮ ಹಿರಿಯರನ್ನು ಹಾಗೂ ಜನ್ಮ ನೀಡಿದವರನ್ನು ನೆನಪಿಸಿಕೊಳ್ಳದವರ ಸಂಖ್ಯೆ ಅಧಿಕವಾಗಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯನ್ನು ಕಳೆದ ಎಪ್ಪತ್ತು ವರ್ಷಗಳಿಂದ ತಪ್ಪದೆ, ತಾತ, ಮಗ ಮತ್ತು ಮೊಮ್ಮಗ ಮೂರು ತಲೆಮಾರುಗಳ ಕುಟುಂಬದವರು ಆಚರಿಸುತ್ತಾ ಬರುತ್ತಿದ್ದಾರೆ. ಅದು ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಅಪ್ಪಟ ಗಾಂಧಿವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಜೈನ ಸಮಾಜದ ದಿವಂಗತ ಜಿನ್ನಪ್ಪಾ ಯಾದವಾಡೆ ಅವರ ಕುಟುಂಬವಾಗಿದೆ.

ಶುಕ್ರವಾರ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ಶೇಡಬಾಳ ಪಟ್ಟಣದಲ್ಲಿ ಆನೆಯ ಮೇಲೆ ಭಾವಚಿತ್ರವನ್ನು ತೆಗೆದುಕೊಂಡು, ಸಹವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮಹಾತ್ಮ ಗಾಂಧೀಜಿಯವರ ಪ್ರತಿಮೆಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು.
ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಜಿನ್ನಪ್ಪಾ ಯಾದವಾಡೆ ಅವರು 1942ರ ‘ಭಾರತ ಬಿಟ್ಟು ತೊಲಗಿ’ (ಭಾರತ ಛೋಡೋ) ಚಳವಳಿ ಪ್ರಾರಂಭವಾದಾಗ ಮಹಾತ್ಮ ಗಾಂಧೀಜಿಯವರು ರೈಲಿನ ಮೂಲಕ ಹೋಗುವಾಗ ಶೇಡಬಾಳ ರೈಲು ನಿಲ್ದಾಣದಲ್ಲಿ ಇಳಿದು ಯುವಕರಿಗೆ ಬ್ರಿಟಿಷರ ವಿರುದ್ಧದ ಚಳವಳಿಯ ಬಗ್ಗೆ ತಿಳಿಸಿದರು. ಇದನ್ನು ಆಗಿನ ಯುವಕ ಜಿನ್ನಪ್ಪಾ ಯಾದವಾಡೆ ಅವರು ಮನದಟ್ಟು ಮಾಡಿಕೊಂಡು, ಮಹಾತ್ಮ ಗಾಂಧೀಜಿಯವರ ಸಂದೇಶವನ್ನು ಸ್ವೀಕರಿಸಿ ದೇಶಪ್ರೇಮ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂದಿನಿಂದ ಮಹಾತ್ಮ ಗಾಂಧೀಜಿಯವರ ಬಗ್ಗೆ ಅಪಾರ ಭಕ್ತಿ ನಿರ್ಮಾಣವಾಯಿತು.
ಯಾದವಾಡೆ ಕುಟುಂಬದವರು ಮೊದಲು ಈ ಮೆರವಣಿಗೆಯನ್ನು ಎತ್ತಿನಗಾಡಿಯಲ್ಲಿ ನಡೆಸುತ್ತಿದ್ದರೆ, ನಂತರ ಅದು ಸೈಕಲ್ ಮೆರವಣಿಗೆಯ ರೂಪ ಪಡೆದಿತು. ಜಿನ್ನಪ್ಪಾ ಯಾದವಾಡೆ ಅವರ ನಿಧನದ ನಂತರ, ಅವರ ಪುತ್ರ ಬಾಹುಬಲಿ ಯಾದವಾಡೆ, ಧರ್ಮಪತ್ನಿ ಜಿನಮತಿ, ಮಕ್ಕಳಾದ ಜಯಧವಲ, ಪಟ್ಟಣ ಪಂಚಾಯಿತಿ ಸದಸ್ಯ ಮಹಾಧವಲ ಹೌಸೇಂದ್ರ ಯಾದವಾಡೆ ಹಾಗೂ ಅವರ ಕುಟುಂಬದವರು ಗಾಂಧಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ.
ಮೊಮ್ಮಕ್ಕಳಾದ ರಾಜಶ್ರೀ, ಶ್ರೇಯಾ ಮತ್ತು ಶ್ರದ್ಧಾ ಅವರ ಸಹಕಾರದಲ್ಲಿಯೂ ಈ ಆಚರಣೆ ಮುಂದುವರಿಯುತ್ತಿದೆ. ಗಾಂಧಿವಾದಿ ಬಾಹುಬಲಿ ಯಾದವಾಡೆ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಸುಪುತ್ರ ಮಹಾಧವಲ ಯಾದವಾಡೆ ಅವರ ನೇತೃತ್ವದಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ತೆರೆದ ವಾಹನದ ಮೇಲೆ ಇಟ್ಟುಕೊಂಡು ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಈ ಕುಟುಂಬವು ಇತರ ಹಬ್ಬಗಳನ್ನು ಅಷ್ಟಾಗಿ ಆಚರಿಸದೆ, ಗಾಂಧಿ ಜಯಂತಿಯನ್ನು ಮುಖ್ಯ ಹಬ್ಬವಾಗಿ ಆಚರಿಸುತ್ತಿರುವುದು ವಿಶೇಷವಾಗಿದೆ.
ಗಾಂಧೀ ಜಯಂತಿಯ ನಿಮಿತ್ತ ಯಾದವಾಡೆ ಕುಟುಂಬದವರು ಗ್ರಾಮದ ಜನರಿಗೆ ಸಿಹಿಯೂಟ ನೀಡಿದರು.
ಮೆರವಣಿಗೆಯಲ್ಲಿ ಜಿನಮತಿ ಬಾಹುಬಲಿ ಯಾದವಾಡೆ, ಹೌಸೇಂದ್ರ ಯಾದವಾಡೆ, ರಾಜಶ್ರೀ, ಶ್ರೇಯಾ, ಶ್ರದ್ಧಾ, ಶಾಂತಿನಾಥ, ಸುಯಶ, ಜಿನೇಂದ್ರ ಹಾಗೂ ಯಾದವಾಡೆ ಬಂಧುಗಳಾದ ಶ್ರೀಮಂತ ಯಾದವಾಡೆ, ಅನಂತಮತಿ ಯಾದವಾಡೆ, ಪ್ರಮೋದ ಯಾದವಾಡೆ, ಗಾಂಧಿವಾದಿ ಹಾಗೂ ‘ಕನ್ನಡ ಹುಚ್ಚರಾಯ’ ಎಂಬ ಬಿರುದು ಪಡೆದ ಎಂ.ಡಿ. ಆಲಾಸೆ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕೆ.ಕೆ. ಗಾವಡೆ, ಸದಸ್ಯರು ಪಾಲ್ಗೊಂಡು ಆನೆಗೆ ಬಾಳೆಹಣ್ಣು ನೀಡಿ ಶ್ರದ್ಧೆಯಿಂದ ಗಾಂಧಿ ತಾತ ಅವರ ಫೋಟೋ ಮೆರವಣಿಗೆಯನ್ನು ನೆರವೇರಿಸಿದರು.
ಸುಕುಮಾರ್ ಬನ್ನುರೆ
ಇನ್ನ ನ್ಯೂಸ್, ಕಾಗವಾಡ
