Kagawad

ಅನಂತನೌಪಿ ವಿಸರ್ಜನೆ ಹಾಗೂ ದಶಲಕ್ಷಣ ಮಹಾಪರ್ವ: ಶೇಡಬಾಳದಲ್ಲಿ ಧಾರ್ಮಿಕ ಆಚರಣೆಗಳ ಸಂಭ್ರಮ

Share

ಜೈನ ಧರ್ಮದಲ್ಲಿ ದಿನನಿತ್ಯದ ತ್ಯಾಗ ಮತ್ತು ನಿಯಮಗಳು (ಸ್ವಯಂ-ನಿಯಂತ್ರಣ) ಆಧ್ಯಾತ್ಮಿಕ ಶುದ್ಧೀಕರಣ, ಕರ್ಮದ ಪಾಪಗಳ ನಿರ್ಮೂಲನೆ ಮತ್ತು ಮೋಕ್ಷದ ಮಾರ್ಗಕ್ಕೆ ಭದ್ರ ಬುನಾದಿಯಾಗಿವೆ. ತ್ಯಾಗ ಎಂದರೆ ಸ್ವಯಂಪ್ರೇರಣೆಯಿಂದ ತನ್ನ ಆಸೆಗಳು, ಭೋಗವಿಲಾಸಗಳು ಮತ್ತು ಅನಗತ್ಯ ವಸ್ತುಗಳು ಅಥವಾ ಅಭ್ಯಾಸಗಳನ್ನು ಬಿಟ್ಟುಬಿಡುವುದು ಎಂದು ಶೇಡಬಾಳ ಜೈನ ಸಮಾಜದ ಪ್ರತಿಷ್ಠಾಚಾರ್ಯ ಕುಮಾರ್ ಆಲಗೌಡರು ಹೇಳಿದರು.

ಶನಿವಾರದಂದು ಶೇಡಬಾಳದ ಭಗವಾನ್ ಮಹಾವೀರ್ ಜೈನಮಂದಿರದಲ್ಲಿ ಸೋಡಾಸ್ಕಾರ ಹಾಗೂ ಅನಂತ ನೌಪಿ ವಿಸರ್ಜನೆ ಕಾರ್ಯಕ್ರಮ ನೆರವೇರಿತು. ಈ ಸಮಾರಂಭದಲ್ಲಿ ಕುಮಾರ್ ಆಲಗೌಡರು ಮಾತನಾಡಿದರು. ಭಗವಾನ್ ಮಹಾವೀರ ಜೈನ ಆಶ್ರಮದ ಮುಖ್ಯಸ್ಥ ಮಾಮಸಾಹೇಬ್ ಪಾಟೀಲ್, ಸುನಿಲ್ ಪಾಟೀಲ್ ಹಾಗೂ ಅತಿಕ್ರಾಂತ್ ಪಾಟೀಲ್ ಇವರ ನೇತೃತ್ವದಲ್ಲಿ ವಿಸರ್ಜನೆ ಹಾಗೂ ಜನಿವಾರ ಧರಿಸುವ ಕಾರ್ಯಕ್ರಮ ನೆರವೇರಿತು.

ಬೆಳಿಗ್ಗೆ ಭಗವಾನ್ ಮಹಾವೀರರ ಪಲ್ಲಕ್ಕಿ ಮೆರವಣಿಗೆಯೂ ನೆರವೇರಿತು. ಶಾಂತಿ ವೃತ್ತದಲ್ಲಿ ವಿಧಿಪೂರ್ವಕ ಪಲ್ಲಕ್ಕಿ ಪೂಜಾ ಕಾರ್ಯಕ್ರಮ ಜರುಗಿತು. ಗ್ರಾಮದ ಪ್ರಮುಖ ಮಾರ್ಗಗಳ ಮುಖಾಂತರ ಮಂದಿರದವರೆಗೆ ಶ್ರಾವಕ-ಶ್ರಾವಕಿಯರ ಮುಖ್ಯ ಉಪಸ್ಥಿತಿಯಲ್ಲಿ ಮೆರವಣಿಗೆ ಜರುಗಿತು. ಪ್ರತಿಷ್ಠಾಚಾರ್ಯ ಸನ್ಮತಿ ಉಪಾಧ್ಯೆ ಹಾಗೂ ಸಮಾಜದ ಮುಖಂಡ, ನಿವೃತ್ತ ಮುಖ್ಯೋಪಾಧ್ಯಾಯ ಕುಮಾರ್ ಮಾಲಗಾವೆ ಮಾತನಾಡಿ, ಸ್ವಯಂ-ನಿಯಂತ್ರಣವನ್ನು ಕಾಯ್ದುಕೊಳ್ಳಲು ಮತ್ತು ಹಿಂಸೆಯನ್ನು ತಪ್ಪಿಸಲು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಶಿಸ್ತುಬದ್ಧ ನಿಯಮಗಳ ಬಗ್ಗೆ ತಿಳಿಸಿದರು.

ಜೀವನದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು ಶ್ರಾವಕರ (ಗೃಹಸ್ಥ/ಅನುಯಾಯಿಗಳ) ನಿಯಮಗಳು ಪ್ರಸಿದ್ಧವಾಗಿವೆ. ಇವುಗಳನ್ನು ಪ್ರತಿದಿನ ಅಥವಾ ವಿಶೇಷ ಹಬ್ಬದ ದಿನಗಳಲ್ಲಿ ಆಚರಿಸಲಾಗುತ್ತದೆ. ಚಿಕ್ಕ ಚಿಕ್ಕ ತ್ಯಾಗ ಹಾಗೂ ನಿಯಮಗಳ ಮೂಲಕ ಇವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ನೀವು ಸ್ಫೂರ್ತಿಯನ್ನು ಪಡೆಯಬಹುದು ಎಂದು ಜೈನ ಶ್ರಾವಕ-ಶ್ರಾವಕಿಯರು ದಶಲಕ್ಷಣ ಪರ್ವದ ಆಚರಣೆಯ ಸಂದರ್ಭದಲ್ಲಿ ಅನುಸರಿಸಬೇಕಾದ ತ್ಯಾಗದ ಕುರಿತು ಹೇಳಿದರು.

ಶುಕ್ರವಾರದಂದು ಪೂಜೆಯಲ್ಲಿ ಭಾಗವಹಿಸಿದ ಎಲ್ಲ ಶ್ರಾವಕಿಯರ ಉಪಸ್ಥಿತಿಯಲ್ಲಿ ಶ್ರೀ ಪದ್ಮಾವತಿ ದೇವಿಯ ಉಡಿ ತುಂಬುವ ಕಾರ್ಯಕ್ರಮ ಭಕ್ತಿಯಿಂದ ಜರುಗಿತು. ಜೈನಮಂದಿರದ ವಿವಿಧ ಅಭಿವೃದ್ಧಿಗಾಗಿ ಸಹಕಾರ ನೀಡಿದ ದಾನಿಗಳನ್ನು ಗೌಡರ ಮನೆತನದಿಂದ ಸನ್ಮಾನಿಸಲಾಯಿತು. ಜನಿವಾರ ಪರಿಣಾಮ ಕಾರ್ಯಕ್ರಮದಲ್ಲಿ ಗ್ರಾಮದ ಪೊಲೀಸ್ ಪಾಟೀಲ್ ರಾಮಗೌಡ ಪಾಟೀಲ್, ಅತಿಕ್ರಾಂತ ಪಾಟೀಲ್, ಸುನಿಲ್ ಪಾಟೀಲ್, ಶುಭಂ ಪಾಟೀಲ್, ಚಿನ್ನಪ್ಪ ನಾಂದನಿ, ಬಾಬಾಸಾಹೇಬ್ ಸೌದತ್ತಿ, ಕುಮಾರ್ ಮಾಲಗಾವೆ, ಶ್ರೀಮತಿ ವಂದನಾ ಸುನಿಲ್ ಪಾಟೀಲ್, ಶ್ರೀಮತಿ ಜಯಶ್ರೀ ಜಿನ್ನಪ್ಪ ನಾಂದನಿ, ರಾಜಶ್ರೀ ಪಾಯಪರಪ, ಸಂಧ್ಯಾ ಸೇರಿದಂತೆ ಅನೇಕ ಶ್ರಾವಕಿಯರು ಭಾಗವಹಿಸಿ ದಶಲಕ್ಷಣ ನೌಪಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಇದೇ ರೀತಿ ಗ್ರಾಮದ ಇನ್ನುಳಿದ ಜೈನಮಂದಿರಗಳಲ್ಲಿ ಹಾಗೂ ಶಿರುಗುಪ್ಪಿ, ಕಾಗವಾಡ, ಉಗಾರ್, ಮಂಗಸುಳಿ, ಮೋಳೆ, ಐನಾಪುರ್ ಮುಂತಾದ ಗ್ರಾಮಗಳ ಜೈನಮಂದಿರಗಳಲ್ಲಿ ದಶಲಕ್ಷಣ ನೌಪಿ ಪರ್ವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

Tags:

error: Content is protected !!