ಸಾಂಸ್ಕೃತಿಕ ನಗರಿ ಬೆಳಗಾವಿಯಲ್ಲಿ ಗಣೇಶ ವಿಸರ್ಜನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಮುಂದುವರಿದಿದ್ದು, ಕಳೆದ ಸುಮಾರು 30 ಗಂಟೆಗಳಿಂದ ಅವಿಶ್ರಾಂತವಾಗಿ ವಿಸರ್ಜನಾ ಪ್ರಕ್ರಿಯೆ ನಡೆಯುತ್ತಿದೆ. ಕಪಿಲೇಶ್ವರ ಹೊಂಡದ ಬಳಿ ಗಣೇಶ ಮೂರ್ತಿಗಳ ಸರತಿ ಸಾಲು ಕಂಡುಬಂದಿದ್ದು, ತಡರಾತ್ರಿಯವರೆಗೂ ವಿಸರ್ಜನೆ ಮುಂದುವರಿಯುವ ಸಾಧ್ಯತೆಯಿದೆ.


ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ಸಡಗರ ಜೋರಾಗಿದ್ದು, ಕಪಿಲೇಶ್ವರ ಹೊಂಡದ ಸುತ್ತಲೂ ನಾಲ್ಕೂ ದಿಕ್ಕುಗಳಲ್ಲಿ ಜನಸಾಗರವೇ ಹರಿದುಬಂದಿದೆ. ಕಳೆದ ಬಾರಿ 36 ಗಂಟೆಗಳ ಕಾಲ ವಿಸರ್ಜನೆ ನಡೆದಿದ್ದ ಹಿನ್ನೆಲೆಯಲ್ಲಿ, ಈ ಬಾರಿಯೂ ಮೆರವಣಿಗೆ ನಿಧಾನವಾಗಿ ಸಾಗುತ್ತಿದ್ದು ಇನ್ನೂ 60ಕ್ಕೂ ಹೆಚ್ಚು ಸಾರ್ವಜನಿಕ ಮಂಡಳಗಳ ಗಣೇಶ ಮೂರ್ತಿಗಳ ವಿಸರ್ಜನೆ ಬಾಕಿ ಉಳಿದಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಚವ್ಹಾಟ್ ಗಲ್ಲಿಯ ಮಂಟಪದಿಂದ ಬೆಳಗಾವಿಯ ಪ್ರಸಿದ್ಧ ‘ರಾಜಾ’ ಗಣೇಶ ಮೂರ್ತಿ ಹೊರ ಬಂದಿದೆ.
ಜನರ ಅಪಾರ ಉತ್ಸಾಹ ಮತ್ತು ಭಕ್ತಿಯ ನಡುವೆ ವಿಸರ್ಜನಾ ಕಾರ್ಯ ಮುಂದುವರಿದಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಿದೆ. ನಾಡಿನೆಡೆಗೆ ಕರುಣಾಳುವಾಗಿ ಬಂದ ವಿಘ್ನನಿವಾರಕನಿಗೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಕಪಿಲೇಶ್ವರ ಹೊಂಡದ ಬಳಿ ಜಮಾಯಿಸಿದ್ದಾರೆ. ಇಂದು ಎರಡನೇಯ ದಿನ ತಡರಾತ್ರಿಯ ತನಕ ವಿಸರ್ಜನಾ ಪರ್ವ ನಿರಂತರವಾಗಿ ಸಾಗುವ ಸಾಧ್ಯತೆಗಳಿವೆ.
