Belagavi

ಬೆಳಗಾವಿಯಲ್ಲಿ ಸತತ 30 ಗಂಟೆಗಳಿಂದ ನಿರಂತರ ಗಣೇಶ ವಿಸರ್ಜನೆ!!!

Share

ತಾಳಕ್ಕೆ ತಕ್ಕಂತೆ ಕುಣಿದು, ಭಕ್ತಿಯಿಂದ ನಲಿದು, ಸಂಭ್ರಮದ 12 ದಿನಗಳ ಗಣೇಶೋತ್ಸವಕ್ಕೆ ಬೆಳಗಾವಿಯಲ್ಲಿ ಅದ್ಧೂರಿ ತೆರೆ ಬೀಳುತ್ತಿದೆ. ಸತತ 30 ಗಂಟೆಗಳಿಗೂ ಅಧಿಕ ಕಾಲ ಸಾಗಿದ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಜನಸಾಗರವೇ ಹರಿದುಬಂದಿದ್ದು, ಸಂಸ್ಕೃತಿ ಹಾಗೂ ಭಕ್ತಿಯ ಅನಾವರಣಗೊಂಡಿದೆ.

ಬೆಳಗಾವಿಯಲ್ಲಿ ಈ ಬಾರಿ ಒಟ್ಟು 12 ದಿನಗಳ ಕಾಲ ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಿತು. 12ನೇ ದಿನವಾದ ಅನಂತ ಚತುರ್ದಶಿಯಂದು ಭಕ್ತಿಪೂರ್ವಕ ಗಣೇಶ ವಿಸರ್ಜನೆ ಆರಂಭಗೊಂಡಿತು. ನಗರದ ಹುತಾತ್ಮ ಚೌಕದ ಬಳಿ ವಿವಿಧ ಮಠಾಧೀಶರು, ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್, ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹಣುಮಂತ ಕೊಂಗಾಲಿ, ಮಾಜಿ ಶಾಸಕರಾದ ಅನೀಲ ಬೆಣಕೆ, ಮಹಾಂತೇಶ್ ಕವಟಗಿಮಠ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹಾಗೂ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕಮ್ ಸೇರಿದಂತೆ ಅನೇಕ ಗಣ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದು ವಿಶೇಷ ಪೂಜೆ ನೆರವೇರಿಸಿದರು. ನಂತರ ಗಣೇಶನ ಪಲ್ಲಕ್ಕಿ ಮೆರವಣಿಗೆಗೆ ಪೂಜೆ ನಡೆಯಿತು. ಈ ವೇಳೆ ಶಾಸಕ ಅಭಯ್ ಪಾಟೀಲ್ ಅವರು ಸ್ವತಃ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಗಮನ ಸೆಳೆದರೆ, ನಂತರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ ಅವರು ಕೂಡ ಮೆರವಣಿಗೆಯಲ್ಲಿ ಭಾಗಿಯಾಗಿ ಮೆರುಗು ತಂದರು.
ಮೊದಲ ಸಾರ್ವಜನಿಕ ಗಣೇಶನಾಗಿ ಮಾಳಿ ಗಲ್ಲಿ ಮಂಡಳದ ಬಪ್ಪನ ಮೂರ್ತಿಯು ವಿಸರ್ಜನೆಗೊಳ್ಳುವ ಮೂಲಕ ಮೆರವಣಿಗೆಗೆ ಅಧಿಕೃತ ಚಾಲನೆ ಸಿಕ್ಕಿತು. ಐತಿಹಾಸಿಕ ಛತ್ರಪತಿ ಧರ್ಮವೀರ ಸಂಭಾಜೀ ಮಹಾರಾಜ್ ವೃತ್ತದಲ್ಲಿ ಗಣೇಶ ಮೂರ್ತಿಗೆ ವಿಶೇಷ ಮಹಾ ಆರತಿ ಸಮರ್ಪಿಸಲಾಯಿತು.

ಮೆರವಣಿಗೆಯ ಮಾರ್ದುದ್ದಕ್ಕೂ ಸಾಂಪ್ರದಾಯಿಕ ಢೋಲ್ ತಾಶಾ, ಝಾಂಜ್ ಪಥಕ ಹಾಗೂ ಭರ್ಜರಿ ಬ್ಯಾಂಡ್ ಬಾಜಾಗಳ ನಿನಾದ ಮುಗಿಲುಮುಟ್ಟಿತ್ತು.

ಇತ್ತ ಮತ್ತೊಂದೆಡೆ ಡಿಜೆ ತಾಳ ಹಾಗೂ ಯುವ ಸಮೂಹದ ಸಖತ್ ಹೆಜ್ಜೆಗಳಿಗೆ ಇಡೀ ನಗರವೇ ಕುಣಿದು ಕುಪ್ಪಳಿಸಿತು. ಹುತಾತ್ಮಚೌಕದಿಂದ ಆರಂಭವಾದ ಈ ಬೃಹತ್ ಮೆರವಣಿಗೆಯು ಕಿರ್ಲೋಸ್ಕರ್ ರಸ್ತೆ, ರಾಮಲಿಂಗ ಖಿಂಡ್ ಗಲ್ಲಿ, ಹೇಮು ಕಲಾನಿ ಚೌಕ್ ಹಾಗೂ ಕಪಿಲೇಶ್ವರ ಮೇಲ್ಸೇತುವೆ ಮಾರ್ಗವಾಗಿ ಸಾಗಿ, ಅಂತಿಮವಾಗಿ ‘ದಕ್ಷಿಣ ಕಾಶಿ’ ಎಂದೇ ಖ್ಯಾತಿ ಪಡೆದ ಕಪಿಲೇಶ್ವರ ತಲುಪಿತು. ನಗರದ ಸುಮಾರು 8 ಕಡೆಗಳಲ್ಲಿ ಮಹಾನಗರ ಪಾಲಿಕೆ ವಿಸರ್ಜನೆಗೆ ಅನುವು ಮಾಡಿಕೊಟ್ಟಿತ್ತು. ಅಲ್ಲದೇ ಪೊಲೀಸ್ ಇಲಾಖೆ ಸಕಲ ಪೊಲೀಸ್ ಬಂದೋಬಸ್ತ್ ಒದಗಿಸಿತ್ತು. ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಮೆರವಣಿಗೆಗೆ ಸಹಕರಿಸಿದವು.

ಸತತ 30 ಗಂಟೆಗಳಿಗೂ ಹೆಚ್ಚು ಕಾಲ ನಿರ್ವಿಘ್ನವಾಗಿ ಸಾಗಿದ ಈ ರೋಮಾಂಚಕ ವಿಸರ್ಜನಾ ಮಹೋತ್ಸವವು ಬೆಳಗಾವಿಯ ಕೋಮು ಸೌಹಾರ್ದತೆ ಮತ್ತು ಐತಿಹಾಸಿಕ ಸಂಸ್ಕೃತಿಗೆ ಮತ್ತೊಮ್ಮೆ ಸಾಕ್ಷಿಯಾಯಿತು.

Tags:

error: Content is protected !!