ನಡೆದಾಡುವ ದೇವರು ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಸಂದೇಶದಂತೆ, ನಿವೃತ್ತ ಕೃಷಿ ಅಧಿಕಾರಿ ಬಿರಾದಾರ್ ಅವರ ನೇತೃತ್ವದಲ್ಲಿ ‘ನಂದಿ ಕೂಗು’ ಅಭಿಯಾನದ ಮೂಲಕ ಗ್ರಾಮಗಳಲ್ಲಿ ಎತ್ತುಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರವು ಅವುಗಳ ಪಾಲನೆ-ಪೋಷಣೆಗಾಗಿ ಪ್ರತಿ ತಿಂಗಳು 11,000 ರೂಪಾಯಿ ಅನುದಾನ ನೀಡಬೇಕೆಂದು ಆಗ್ರಹಿಸಿ ಕಾಗವಾಡದ ರೈತರು ಎತ್ತಿನ ಬಂಡಿಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.


ಗುರುವಾರ ಕಾಗವಾಡದ ಪಟ್ಟಣ ಪಂಚಾಯಿತಿಯ ಸಭಾಭವನದ ಬಳಿ ಎತ್ತುಗಳು ಮತ್ತು ಬಂಡಿಗಳೊಂದಿಗೆ ಒಂದಗೂಡಿದ ರೈತರು, ಗ್ರಾಮದ ಮುಖ್ಯ ಮಾರ್ಗದಿಂದ ಮೆರವಣಿಗೆ ನಡೆಸಿ ರಾಣಿ ಚೆನ್ನಮ್ಮ ವೃತ್ತದ ಮೂಲಕ ತಹಶೀಲ್ದಾರ್ ರವೀಂದ್ರ ಹಾದಿಮನಿ ಅವರಿಗೆ ಮನವಿ ಅರ್ಪಿಸಿದರು.

ರೈತ ಮುಖಂಡ ಅರುಣ ಜೋಶಿ ಮಾತನಾಡಿ, ಜೋಡೆತ್ತಿನ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಕಾನೂನು ಜಾರಿಗೆ ತರಬೇಕು ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11,000 ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ಹಕ್ಕೊತ್ತಾಯ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಎತ್ತಿನ ನೇಗಿಲಿನಿಂದ ಉಳುಮೆ ಮಾಡುವ ಮೂಲಕ ಮಣ್ಣಿನ ಫಲವತ್ತತೆ ಹಾಗೂ ಪಂಚಮಹಾಭೂತಗಳ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಜೋಡೆತ್ತಿನ ಕೃಷಿಕರನ್ನು ‘ನೇಗಿಲಯೋಗಿಗಳು’ ಎಂದು ಪರಿಗಣಿಸಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಪ್ರಮುಖ ವ್ಯಕ್ತಿಗಳ ಮಾತುಗಳು:
ಮಹದೇವ್ ಉದಗಾಂವೆ (ನಿವೃತ್ತ ಮುಖ್ಯ ಅಧಿಪಕರು ಹಾಗೂ ರೈತರು): ಆಧುನಿಕ ಕೃಷಿ ಪದ್ಧತಿಗಳ ನಡುವೆ ಜೋಡೆತ್ತಿನ ಕೃಷಿಕರ ಸಂಖ್ಯೆ ಕ್ಷೀಣಿಸುತ್ತಿದ್ದು, ಸಾಂಪ್ರದಾಯಿಕ ಕೃಷಿ ಸಂಸ್ಕೃತಿ ಮತ್ತು ಪರಿಸರ ಸ್ನೇಹಿ ಪದ್ಧತಿ ನಶಿಸುವ ಆತಂಕವಿದೆ. ಹೀಗಾಗಿ ಜೋಡೆತ್ತಿನ ಕೃಷಿಯನ್ನು ಉಳಿಸಿ ಬೆಳೆಸಲು ರಾಜ್ಯ ಸರ್ಕಾರದ ಬಜೆಟ್‌ನಲ್ಲಿ 10 ಪ್ರತಿಶತ ಹಣವನ್ನು ಮೀಸಲಿಡುವ ಕಾನೂನು ಜಾರಿಗೆ ತರಬೇಕು.
ಕಾಕಾ ಪಾಟೀಲ್ (ಪ್ರಗತಿಪರ ರೈತರು ಹಾಗೂ ನ್ಯಾಯವಾದಿಗಳು): ಜೋಡೆತ್ತಿನ ಕೃಷಿಕರಿಗೆ ಮಾಸಿಕ ₹11,000 ಪ್ರೋತ್ಸಾಹಧನ, ಗುಣಮಟ್ಟದ ಬೀಜ, ಔಷಧಿ ಹಾಗೂ ಗೊಬ್ಬರಕ್ಕೆ ಸಹಾಯಧನ ನೀಡಬೇಕು. ಸಾವಯವ ಹಾಗೂ ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ನೀಡಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಅಶೋಕ್ ಚೌಗುಲೆ, ಬಾಪು ಮಾಲಗಾವೆ, ಬಾಹುಬಲಿ ಠೊತ್ ತಮ್ಮ ಅಳಲುವನ್ನು ತಹಶೀಲ್ದಾರ್ ಮುಂದೆ ತೋಡಿಕೊಂಡರು.
ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಆರಂಭಗೊಂಡ ‘ನಂದಿ ಕೂಗು’ ಅಭಿಯಾನದ ಮೂಲಕ ಕಳೆದ ಹಲವು ವರ್ಷಗಳಿಂದ ನಂದಿ ಕೃಷಿ ಸಂಸ್ಕೃತಿ ಉಳಿವಿಗಾಗಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮನವಿ ಸ್ವೀಕರಿಸಿದ ತಹಶೀಲ್ದಾರರು, ರೈತರ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ರವಾನಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಿಎಸ್‌ಐ ರಾಘವೇಂದ್ರ ಖೊತ್, ದಾದಾ ಪಾಟೀಲ್, ವಿಜಯ ಸಾಳುಂಕೆ, ಅಪ್ಪಾಸಾಹೇಬ್ ಚುನ್ನಾಪುಗೊಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
