Kagawad

ಕಾಗವಾಡದ ಶಿರಗುಪ್ಪಿ ಶುಗರ್ ವರ್ಕ್ಸ್ 16ನೇ ಕಬ್ಬು ನುರಿಸುವ ಹಂಗಾಮಿಗೆ ಬಾಯ್ಲರ್ ಪೂಜೆ ಮೂಲಕ ಅದ್ಧೂರಿ ಚಾಲನೆ!

Share

ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ 16ನೇ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪೂಜೆಯು ಹುಕ್ಕೇರಿ ತಾಲೂಕಿನ ಸಿದ್ದ ಸಂಸ್ಥಾನ ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ನಾಂದಣಿ ಜೈನ ಮಠದ ಜನಸೇನ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬುಧವಾರ ನೆರವೇರಿತು.

ಕಾರ್ಖಾನೆಯ ಚೇರ್ಮನ್ ಕೆ.ಪಿ. ಮಗೆಣ್ಣವರ, ಎಂ.ಡಿ. ಡಾ. ರಾಜೇಂದ್ರ ದೊಡ್ಡನವರ್, ಪ್ರವೀಣ್ ದೊಡ್ಡನವರ್ ಹಾಗೂ ಉಪಾಧ್ಯಕ್ಷ ಅರುಣ್ ಪರಾಂಡೆ ಅವರ ಉಪಸ್ಥಿತಿಯಲ್ಲಿ ಬಾಯ್ಲರ್ ಹಾಗೂ ಕಬ್ಬು ಕ್ಯಾರಿಯರ್‌ಗೆ ಪೂಜೆ ಸಲ್ಲಿಸುವ ಮೂಲಕ 16ನೇ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿರುವ ಕೆ.ಪಿ. ಮಗೆಣ್ಣವರ ಅವರು ಪರಿಶ್ರಮದಿಂದ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿದ್ದು, ಡಾ. ರಾಜೇಂದ್ರ ದೊಡ್ಡನವರ್ ಅವರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಇದೀಗ 16ನೇ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪೂಜೆ ನೆರವೇರಿಸಲಾಗಿದೆ. ಕಾರ್ಖಾನೆಯು ಇತರ ಸಕ್ಕರೆ ಕಾರ್ಖಾನೆಗಳಿಗಿಂತ ಮೊದಲು ಬಿಲ್ ಘೋಷಣೆ ಮಾಡಿದ್ದು, ರೈತರಿಗೆ ಹೆಚ್ಚಿನ ದರ ನೀಡಿದೆ. ಆದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಕಾರ್ಖಾನೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಸಕ್ಕರೆ ಕಾರ್ಖಾನೆಯ ಚೇರ್ಮನ್ ಕೆ.ಪಿ. ಮಗೆಣ್ಣವರ ಮಾತನಾಡಿ, 16ನೇ ಹಂಗಾಮು ಪ್ರಾರಂಭಗೊಳ್ಳಲಿದೆ. ಈವರೆಗೆ ರೈತರು ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಕಾರ್ಖಾನೆಯು ಎಲ್ಲರಿಗಿಂತ ಹೆಚ್ಚಿನ ದರ ನೀಡಿದೆ. ಮುಂದೆ ಯಾವುದೇ ದರ ಘೋಷಣೆಯಾದರೂ ಅದಕ್ಕೆ ಅನುಗುಣವಾಗಿ ಪಾವತಿಸಲು ನಾವು ಸಿದ್ಧರಿದ್ದೇವೆ. ಪ್ರತಿವರ್ಷದಂತೆ ಈ ವರ್ಷವೂ ಉತ್ತಮ ಗುಣಮಟ್ಟದ ಕಬ್ಬು ಪೂರೈಸಿ ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.

ಸಕ್ಕರೆ ಕಾರ್ಖಾನೆಯ ಎಂ.ಡಿ. ಡಾ. ರಾಜೇಂದ್ರ ದೊಡ್ಡನವರ್ ಹಾಗೂ ಉಪಾಧ್ಯಕ್ಷ ಅರುಣ್ ಪರಾಂಡೆ ಮಾತನಾಡಿ, ಈ ವರ್ಷ ಅಲ್ಪ ಪ್ರಮಾಣದ ಮಳೆಯಾಗಿರುವುದರಿಂದ ಕಬ್ಬಿನ ಇಳುವರಿ ಅಷ್ಟಾಗಿ ಇರುವುದಿಲ್ಲ. ಹಂಗಾಮು ಕೂಡ ಅಲ್ಪ ದಿನಗಳಷ್ಟೇ ನಡೆಯುವ ಸಾಧ್ಯತೆಯಿದ್ದು, ಎಲ್ಲ ರೈತರು ತಮ್ಮ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಸಹಕರಿಸಬೇಕು ಎಂದು ಕರೆ ನೀಡಿದರು.

ಒಂದೇ ದಿನದಲ್ಲಿ ಬಾಯ್ಲರ್ ಹಾಗೂ ಕಬ್ಬು ಕ್ಯಾರಿಯರ್ ಪೂಜೆ ನೆರವೇರಿಸಲಾಯಿತು. ಕಾರ್ಖಾನೆಯ ಕೆನ ವಿಭಾಗದ ಮುಖ್ಯಸ್ಥ ಕೌತುಕ ಮಗೆಣ್ಣವರ ದಂಪತಿಗಳಿಂದ ಪೂಜಾ ವಿಧಿ ವಿಧಾನಗಳು ನೆರವೇರಿದವು.

ಕಾರ್ಯಕ್ರಮದಲ್ಲಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಹಾವೀರ ಸುಗಾನವರ್, ರಾಜಗೊಂಡ್ ಸುಗಾನವರ, ಕೆನ ಮ್ಯಾನೇಜರ್ ಮಹಾವೀರ ಬಿರನಾಳೆ, ಬಸವರಾಜ ಯಶವಂತ, ಉಲ್ಲಾಸ್ ಪಾಟೀಲ, ಪಿಕೆ ಇತ್ತಲಕರಂಜಿ, ವಿದ್ಯಾಧರ ಧೊಂಡಾರೆ, ಪ್ರಗತಿಪರ ರೈತ ಮಹೇಂದ್ರ ಕುಸನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಕ್ಕರೆ ಕಾರ್ಖಾನೆಯ ಎಚ್.ಆರ್. ವೀರೇಂದ್ರ ಜಾಡರ್ ಸ್ವಾಗತಿಸಿ, ವಂದಿಸಿದರು.

Tags:

error: Content is protected !!