Kagawad

ಶಿರಗುಪ್ಪಿ ಶುಗರ್ ವರ್ಕ್ಸ್‌ನಲ್ಲಿ ಸೆ.23ರಂದು ಬಾಯ್ಲರ್ ಪೂಜೆ; ಅಧ್ಯಕ್ಷ ಕೆ.ಪಿ. ಮಗೆಣ್ಣವರ

Share

ಕಾಗವಾಡದ ಶಿರಗುಪ್ಪಿ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ ಪ್ರಸಕ್ತ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಪೂಜೆಯು ಸೆ.23ರಂದು ಬುಧವಾರ ನೆರವೇರಲಿದೆ ಎಂದು ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ಕೆ.ಪಿ. ಮಗೆಣ್ಣವರ ಹೇಳಿದರು.

ಸೋಮವಾರ ಕಾಗವಾಡದ ಶಿರಗುಪ್ಪಿ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯಲ್ಲಿ ತಮ್ಮ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಕ್ಕರೆ ಕಾರ್ಖಾನೆ, ಲಕ್ಷ್ಮೀ ಬ್ಯಾಂಕ್ ಹಾಗೂ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸುವ ಮೂಲಕ ಈ ಸಂಸ್ಥೆಗಳಿಂದ ಅನೇಕ ಕುಟುಂಬಗಳಿಗೆ ನೆರವಾಗಿದ್ದೇನೆ. ಇದು ನನ್ನ ಕರ್ತವ್ಯವೆಂದು ಭಾವಿಸಿ ಸೇವೆ ಸಲ್ಲಿಸಿದ್ದೇನೆ. ಇದನ್ನು ಗಮನಿಸಿ ರಾಜ್ಯ ಸರ್ಕಾರವು ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ನನ್ನೊಬ್ಬನಿಗೆ ಸಲ್ಲುವ ಗೌರವವಲ್ಲ, ನಮ್ಮ ಎಲ್ಲ ಸಂಸ್ಥೆಗಳಿಗೆ ಸಲ್ಲುವ ಗೌರವವಾಗಿದೆ ಎಂದು ಕೆ.ಪಿ. ಮಗೆಣ್ಣವರ ತಿಳಿಸಿದರು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಶ್ರೀಮಠದ ಮಂಜುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಕೆ.ಪಿ. ಮಗೆಣ್ಣವರ ಅವರು ತಮ್ಮ ಜೀವನದಲ್ಲಿ ತಿಳಿದು ಬದುಕಿದವರು. ತಮ್ಮಿಂದ ಇನ್ನೊಬ್ಬರಿಗೆ ಸಹಾಯ, ಸಹಕಾರ ನೀಡುತ್ತಾ, ಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಿದವರು. ಇವರು ಇತರರನ್ನು ತುಳಿದು ಬದುಕಿದವರಲ್ಲ, ಇತರರಿಗೆ ಸಹಾಯ ಮಾಡುತ್ತಾ ಬದುಕಿದವರು. ಇಂತಹ ವ್ಯಕ್ತಿಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರ ಕೈಯಲ್ಲಿರುವ ಐದು ಬೆರಳುಗಳ ಮಹತ್ವವನ್ನು ವಿವರಿಸಿದ ಸ್ವಾಮೀಜಿ, ಸಮಾಜದಲ್ಲಿ ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನ ಮಹತ್ವವನ್ನು ತಿಳಿಸಿದರು.

ಶಿರಗುಪ್ಪಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಅರುಣ್ ಪರಾಂಡೆ ಮಾತನಾಡಿ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು ಅಕ್ಟೋಬರ್ 15ರೊಳಗೆ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಪ್ರಾರಂಭಿಸಲು ಸೂಚನೆ ನೀಡಿವೆ. ಪ್ರಸಕ್ತ ವರ್ಷ ಕಬ್ಬಿನ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ. ಅಲ್ಲದೆ ಮಳೆಯ ಪ್ರಮಾಣವೂ ಕಡಿಮೆಯಾಗಿರುವುದರಿಂದ ಕಬ್ಬಿನ ಉತ್ಪಾದನೆ ಸಮರ್ಪಕವಾಗಿಲ್ಲ. ಈ ಕಾರಣದಿಂದ ಈ ವರ್ಷದ ಹಂಗಾಮು ಕೆಲ ತಿಂಗಳುಗಳಲ್ಲಿ ಮಾತ್ರ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಈ ವರ್ಷದ ಕಬ್ಬು ನುರಿಸುವ ಹಂಗಾಮನ್ನು ಶೀಘ್ರವಾಗಿ ಪ್ರಾರಂಭಿಸಿ, ಕಬ್ಬಿಗೆ ಸರ್ಕಾರದಿಂದ ಯಾವ ದರ ಘೋಷಣೆಯಾಗುತ್ತದೆಯೋ ಅದಕ್ಕೆ ಅನುಗುಣವಾಗಿ ದರ ನೀಡಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ಕೆ.ಪಿ. ಮಗೆಣ್ಣವರ ಅವರ ಹುಟ್ಟುಹಬ್ಬದ ನಿಮಿತ್ತ ಕಾರ್ಖಾನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಸಮಾರಂಭದಲ್ಲಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಹಾವೀರ ಸುಗಾನವರ, ಹಿರಿಯರಾದ ಅರುಣ ಜೋಶಿ, ಲಕ್ಷ್ಮಣ ಸೂರ್ಯವಂಶಿ, ಎಸ್.ಎಂ. ಕೋಣೆ, ಎಚ್.ಆರ್. ವೀರೇಂದ್ರ ಜಾಡರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಖಾನೆಯ ವಿವಿಧ ವಿಭಾಗಗಳ ಅಧಿಕಾರಿಗಳಾದ ಮಹಾವೀರ ಬಿರನಾಳೆ, ಬಸವರಾಜ್ ಯಶವಂತ್, ಉಲ್ಲಾಸ್ ಪಾಟೀಲ್, ಕೌತುಕ ಮಗೆಣ್ಣವರ, ಪಿ.ಕೆ. ಇಂಚಲಕರಂಜಿ, ವಿದ್ಯಾಧರ ಧೋಡಾಂರೆ, ಲಕ್ಷ್ಮೀ ಬ್ಯಾಂಕಿನ ಸಿಇಒ ಸಾಗರ್ ಮಂಗಸುಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೀರೇಂದ್ರ ಜಾಡರ್ ನಿರೂಪಿಸಿ, ವಂದಿಸಿದರು.

ಸುಕುಮಾರ್ ಬನ್ನೂರೆ, ನ್ಯೂಸ್ ಕಾಗವಾಡ.

Tags:

error: Content is protected !!