Kagawad

ಕಾಗವಾಡ ತಾಲೂಕ ಬರಪೀಡಿತ ತಾಲೂಕ ಘೋಷಣೆಗೆ ಶಾಸಕ ರಾಜು ಕಾಗೆ ಪ್ರಯತ್ನ: ಶಿವಗೌಡ ಕಾಗೆ

Share

ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಕಾಗವಾಡ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆ ಸಚಿವರೊಂದಿಗೆ ಸೆ.18ರಂದು ದೂರವಾಣಿ ಮೂಲಕ ಮಾತನಾಡಿ, ಕಾಗವಾಡ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ, ಬಿಜೆಪಿ ಮುಖಂಡರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಪ್ರತಿಭಟನೆ ನಡೆಸಿ, ತಮ್ಮ ಪ್ರತಿಭಟನೆಯಿಂದಲೇ ಕಾಗವಾಡ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಿವಗೌಡ ಕಾಗೆ ಹೇಳಿದರು.

ಉಗಾರದಲ್ಲಿ ಶಿವಗೌಡ ಕಾಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಭೆ ಸೇರಿ, ಕಾಗವಾಡ ತಾಲೂಕು ಬರಪೀಡಿತ ಎಂದು ಘೋಷಣೆಯಾದ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿವಗೌಡ ಕಾಗೆ ಮಾತನಾಡಿ, ರಾಜ್ಯಾದ್ಯಂತ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೆ.17ರಂದು ರಾಜ್ಯದ 53 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಇದರಲ್ಲಿ ಅಥಣಿ ತಾಲೂಕು ಸೇರ್ಪಡೆಯಾಗಿತ್ತು. ಕಾಗವಾಡ ಹಾಗೂ ಅಥಣಿ ತಾಲೂಕುಗಳು ಕಂದಾಯ ಇಲಾಖೆಯಲ್ಲಿ ಜಂಟಿಯಾಗಿರುವುದರಿಂದ ಅಥಣಿ ತಾಲೂಕು ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆಯಾದ ವಿಷಯವನ್ನು ತಕ್ಷಣವೇ ಶಾಸಕ ರಾಜು ಕಾಗೆ ಅವರು ಮುಖ್ಯಮಂತ್ರಿ ಹಾಗೂ ಕಂದಾಯ ಇಲಾಖೆ ಸಚಿವರ ಗಮನಕ್ಕೆ ತಂದಿದ್ದರು. ಇದರ ಪರಿಣಾಮವಾಗಿ ಸೆ.23ರಂದು ಕಾಗವಾಡ ತಾಲೂಕನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಲಾಯಿತು ಎಂದು ಹೇಳಿದರು.

ಬಿಜೆಪಿ ಪಕ್ಷದ ಕೆಲ ಮುಖಂಡರು ಕಾಗವಾಡ ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಿಸುವಲ್ಲಿ ಶಾಸಕರು ಕಾಳಜಿ ವಹಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ತಮ್ಮ ಪ್ರತಿಭಟನೆಯಿಂದಲೇ ಕಾಗವಾಡ ತಾಲೂಕು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಹೇಳಿಕೊಂಡು ಸಂಭ್ರಮಾಚರಣೆ ನಡೆಸಿದ್ದಾರೆ. ಆದರೆ, ವಾಸ್ತವವಾಗಿ ಶಾಸಕ ರಾಜು ಕಾಗೆ ಅವರು ಈ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿದ್ದರು ಎಂದು ಶಿವಗೌಡ ಕಾಗೆ ಹೇಳಿದರು.

ತಾಲೂಕಿನ ರೈತರಿಗೆ ಜಾತಿ, ಪಕ್ಷದ ಭೇದವಿಲ್ಲದೆ ಸಮಾನವಾಗಿ ನ್ಯಾಯ ದೊರೆಯಬೇಕು. ರೈತರು ಸಂಕಷ್ಟದಲ್ಲಿರುವ ಇಂತಹ ಸಂದರ್ಭದಲ್ಲಿ ಬರಪೀಡಿತ ತಾಲೂಕು ಘೋಷಣೆಯ ವಿಚಾರದಲ್ಲಿ ರಾಜಕೀಯ ಮಾಡದೆ, ರೈತರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಉಗಾರ ಪುರಸಭೆ ಸದಸ್ಯ ವೀರಭದ್ರ ಕಟಗೇರಿ ಮಾತನಾಡಿ, ಶಾಸಕ ರಾಜು ಕಾಗೆ ಅವರು ಅನಾರೋಗ್ಯದಲ್ಲಿದ್ದರೂ ಕ್ಷೇತ್ರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಸಚಿವರೊಂದಿಗೆ ನಿರಂತರ ಸಂಪರ್ಕ ಹೊಂದಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷದ ಕೆಲ ಮುಖಂಡರು ಅಭಿವೃದ್ಧಿಗಿಂತ ರಾಜಕೀಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಕೃಷ್ಣಾ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ್ ವಾಘಮೋಡೆ ಮಾತನಾಡಿ, ಶಾಸಕ ರಾಜು ಕಾಗೆ ಅವರು ಕಾಗವಾಡ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ದೂರವಾಣಿ ಮತ್ತು ಪತ್ರದ ಮೂಲಕ ಮನವಿ ಮಾಡಿದ್ದರು. ಈ ವಿಚಾರಕ್ಕೆ ತಾನೇ ಸಾಕ್ಷಿಯಾಗಿರುವುದಾಗಿ ಹೇಳಿದರು.

ಉಗಾರ ಪಿಕೆಪಿಎಸ್ ಅಧ್ಯಕ್ಷ ದಾದೋಬಾ ದೂರುಷೆ, ಉಗಾರ ಪುರಸಭೆ ಉಪಾಧ್ಯಕ್ಷ ಸತೀಶ್ ಜಗತಾಪ್, ಪಾರ್ಶ್ವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲಗೌಡ ಪಾಟೀಲ, ಪುರಸಭೆ ಸದಸ್ಯರಾದ ದಿಲೀಪ ಹುಲ್ಲೋಳಿ, ವೀರಭದ್ರ ಕಟಗೇರಿ, ಗಂಗಾಧರ ಕಲಾಲ್, ಬಸು ಸಾಂಘವೆ, ರಸೂಲ್ ನದಾಫ್, ಶಾಸಕರ ಆಪ್ತ ಸಹಾಯಕ ಮಲ್ಲಾರಿ ಕಾಟಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!