ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಕಾವು ಈಗ ರಂಗೇರುತ್ತಿದ್ದು, ಅಕ್ಟೋಬರ್ 6ರಂದು ಉಮೇದುವಾರಿಕೆ ಸಲ್ಲಿಕೆಗೆ ಕೊನೆಯ ದಿನವಾದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಭರ್ಜರಿ ರೋಡ್ ಶೋ ಮೂಲಕ ತಮ್ಮ ನಾಮಪತ್ರ ಸಲ್ಲಿಸಿದರು.



ನಗರದ ಕಡಪ್ಪಾ ಮೈದಾನದಿಂದ ಆರಂಭಗೊಂಡ ರೋಡ್ ಶೋ, ಜುಬ್ಲಿ ವೃತ್ತ ಹಾಗೂ ಕೋರ್ಟ್ ವೃತ್ತದ ಮಾರ್ಗವಾಗಿ ಸುಮಾರು 1 ಕಿಲೋಮೀಟರ್ ಬೃಹತ್ ಮೆರವಣಿಗೆಯ ಮೂಲಕ ಸಾಗಿತು. ಬಳಿಕ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರು ಜಿಲ್ಲಾ ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಇನ್ನು ರೋಡ್ ಶೋನಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕರಾದ ಲಕ್ಷ್ಮಣ್ ಸವದಿ, ಎನ್.ಎಚ್. ಕೊನರೆಡ್ಡಿ, ಶ್ರೀನಿವಾಸ್ ಮಾನೆ ಸೇರಿದಂತೆ ಧಾರವಾಡ ಮಹಾನಗರ ಜಿಲ್ಲಾ ಹಾಗೂ ಗ್ರಾಮೀಣ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಜಯಘೋಷಗಳು ಮೊಳಗಿದವು. ಆದರೆ ಮತದಾರ ಪ್ರಭು ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ.

