ಪಶ್ಚಿಮ ಪದವೀಧರ ಚುನಾವಣಾ ಅಖಾಡ ಈಗ ರಂಗುಪಡೆದುಕೊಳ್ಳುತ್ತಿದೆ. ಅಕ್ಟೋಬರ್ 6ರಂದು ನಾಮ ಪತ್ರ ಸಲ್ಲಿಕೆಗೆ ಕೊನೆಯದಿನವಿದ್ದು, ಈ ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ನಡುವೆ ಇನ್ನೊಬ್ಬ ವ್ಯಕ್ತಿ ಪಕ್ಷೇತರ ಅಭ್ಯರ್ಥಿಯಾಗಿ ವಿಜಯಪುರ ಶಾಸಕ ಯತ್ನಾಳ ಅವರ ಉಪಸ್ಥಿತಿಯಲ್ಲಿ ನಾಮ ಪತ್ರ ಸಲ್ಲಿಕೆಗೆ ಇಂದು ಮುಂದಾಗಿದ್ದಾರೆ.


ಹೌದು…ಉದ್ಯೋಗ ಆಕಾಂಕ್ಷಿ ಸೇರಿ ಇತ್ತೀಚಿನ ಕೆಪಿಎಸ್ಸಿ ಹಗರಣ ಕುರಿತಾಗಿ ಹೋರಾಟಗಳನ್ನು ಮಾಡುತ್ತಲೇ ಬಂದಿರುವ ಅಕ್ಸಾ ವಿದ್ಯಾರ್ಥಿ ಸಂಘಟನೆಯ ಮುಖಂಡ ಕಾಂತಕುಮಾರ ಅಧಿಕೃತವಾಗಿ ಪಶ್ಚಿಮ ಪದವೀಧರ ಚುನಾವಣಾ ಅಖಾಡಕ್ಕೆ ಇಂದು ನಾಮಪತ್ರ ಸಲ್ಲಿಸುವ ಮೂಲಕ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಹಿಂದೂ ಫೈಯರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಪಸ್ಥಿತಿಯಲ್ಲಿ ನಾಮ ಪತ್ರ ಸಲ್ಲಿಸಲಿರುವ ಕಾಂತಕುಮಾರ ಅಧಿಕೃತವಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಧಾರವಾಡ ಶ್ರೀ ನಗರದ ಶಿವಾಲಯದಲ್ಲಿ ಪೂಜೆ ಸಲ್ಲಿಸಿ ಯತ್ನಾಳ ಅವರ ಉಪಸ್ಥಿತಿಯಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ತಮ್ಮ ಉಮೇದುವಾರಿಕೆ ಸಲ್ಲಿಸುವವರಿದ್ದಾರೆ. ಈಗಾಗಲೇ ಎನ್ಡಿಎ ಅಭ್ಯರ್ಥಿಯಾಗಿ ಎಸ್ ವಿ ಸಂಕನೂರ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೋಹನ ಲಿಂಬಿಕಾಯಿ ಪಶ್ಚಿಮ ಪದವೀಧರ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಈ ಇಬ್ಬರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ನಡುವೆಯೇ ಪಕ್ಷೇತರ ಅಭ್ಯರ್ಥಿಯಾಗಿ ಕಾಂತಕುಮಾರ ಪಶ್ಚಿಮ ಪದವೀಧರ ಅಖಾಡಕ್ಕೆ ಇಳಿದಿರುವುದು, ಬಿಜೆಪಿ ಜೆಡಿಎಸ್ ಅಭ್ಯರ್ಥಿಯಾಗಿರುವ ಸಂಕನೂರು ಹಾಗೂ ಕೈ ಅಭ್ಯರ್ಥಿ ಲಿಂಬಿಕಾಯಿಯವರಿಗೆ ಹಸ ತಲೆನೋವು ತಂದೊಡಿರುವುದು ಸುಳ್ಳಲ್ಲ..
