Dharwad

ಹೆಸ್ಕಾಂ ನಿರ್ಲಕ್ಷ್ಯಕ್ಕೆ 20 ಎಕರೆಯಲ್ಲಿ ಬೆಳೆದ ಕಬ್ಬು ಸುಟ್ಟು ಭಸ್ಮ !!!??

Share

ಧಾರವಾಡ ತಾಲೂಕಿನ ತೇಗೂರ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ 20 ಎಕರೆ ಪ್ರದೇಶದಲ್ಲಿದ್ದ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಸಾಲ ಮಾಡಿ ಕೈತುಂಬಾ ಬೆಳೆದಿದ್ದ ಬೆಳೆ ಕಣ್ಣೆದುರಲ್ಲೇ ಬೂದಿಯಾಗಿದ್ದರಿಂದ ರೈತ ಅತೀವ ಸಂಕಷ್ಟಕ್ಕೆ ಸಿಲುಕಿದ್ದು, ಹೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡ ತಾಲೂಕಿನ ತೇಗೂರ ಗ್ರಾಮದಲ್ಲಿ ಮೋಹನ್ ಹುದ್ದಾರ ಎಂಬ ರೈತರಿಗೆ ಸೇರಿದ 20 ಎಕರೆ ಕಬ್ಬಿನ ಗದ್ದೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಬ್ಬಿನ ಗದ್ದೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗಳು ಪರಸ್ಪರ ತಾಗಿ ಉಂಟಾದ ಸ್ಪಾರ್ಕ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಸ್ಥಳೀಯ ರೈತರು ಬೆಂಕಿ ನಂದಿಸಲು ಹರಸಾಹಸ ಪಟ್ಟರಾದರೂ, ಬೆಂಕಿ ನಿಯಂತ್ರಣಕ್ಕೆ ಸಿಗಲಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಇಡೀ ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.


ಈ ಅನಾಹುತಕ್ಕೆ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯೇ ನೇರ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದ್ದೆಯ ಮೇಲಿರುವ ಹಳೆಯ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಅನೇಕ ಬಾರಿ ಹೆಸ್ಕಾಂಗೆ ಮನವಿ ಮಾಡಿಕೊಂಡಿದ್ದರೂ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸದ್ಯ ಕಬ್ಬಿನ ಕಾರ್ಖಾನೆಗಳು ಬಂದ್ ಇರುವುದರಿಂದ ಸುಟ್ಟ ಕಬ್ಬನ್ನು ಏನು ಮಾಡಬೇಕೆಂದು ತಿಳಿಯದೆ ರೈತ ಕಣ್ಣೀರಿನಲ್ಲಿದ್ದಾರೆ. ಸಂಕಷ್ಟದಲ್ಲಿರುವ ರೈತನಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು, ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

error: Content is protected !!