Belagavi

ಬೆಳಗಾವಿ: ಅಕ್ರಮ ಮರಳುಗಾರಿಕೆ ಪ್ರಶ್ನಿಸಿದ್ದಕ್ಕೆ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ; ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

Share

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆಯನ್ನು ಪ್ರಶ್ನಿಸಿದ ಕುಟುಂಬದ ಮೇಲೆ ದಂಧೆಕೋರರು ಮನಬಂದಂತೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದ್ದು, ಮರಳು ಮಾಫಿಯಾದ ಈ ದೌರ್ಜನ್ಯದ ಬಗ್ಗೆ ಸಂತ್ರಸ್ತರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಹೂಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದಲ್ಲಿ ಯಾವುದೇ ಅಧಿಕೃತ ಟೆಂಡರ್ ಇಲ್ಲದೆ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರಿಂದ ನದಿ ತೀರ ಹಾಗೂ ಜಮೀನುಗಳು ಸಂಪೂರ್ಣ ಹಾಳಾಗುತ್ತಿವೆ. ದನಕರುಗಳಿಗೆ ಕುಡಿಯಲು ಶುದ್ಧ ನೀರು ಸಿಗದೆ ಕೆಸರುಮಯವಾಗುತ್ತಿರುವುದಲ್ಲದೆ, ವೇಗವಾಗಿ ಬರುವ ಮರಳು ವಾಹನಗಳಿಂದ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಈ ಅಕ್ರಮ ದಂಧೆಯ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸತತವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ತೀವ್ರ ಅಳಲು ತೋಡಿಕೊಂಡಿದ್ದಾರೆ.

ಮರಳು ದಂಧೆಯ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಸಂದೇಹದಿಂದ, ಮಹಾಂತೇಶ್ ಮಾರುತಿ ಕಟಾಬಳಿ, ಲಕ್ಷಪ್ಪ ಹಾಗೂ ಕೆಂಪಣ್ಣ ಕಟಾಬಳಿ ಸೇರಿದಂತೆ ಮತ್ತಿತರರು ಬೊಲೆರೋ ವಾಹನದಲ್ಲಿ ಬಂದು ಸಂತ್ರಸ್ತರ ಮನೆ ಮುಂದೆ ಗಲಾಟೆ ನಡೆಸಿದ್ದಾರೆ. ಮರಳು ಸಾಗಾಟದ ಫೋಟೋಗಳನ್ನು ಅಧಿಕಾರಿಗಳಿಗೆ ಕಳುಹಿಸುತ್ತೀರಾ ಎಂದು ಹೀಯಾಳಿಸಿ, ರವಿ ಕಲ್ಲಪ್ಪ ಪೂಜಾರಿ ಅವರ ಪತ್ನಿ ಶೋಭಾ ಅವರ ತಲೆಗೆ ಕಲ್ಲಿನಿಂದ ಹೊಡೆದು, ತಾಯಿ ಗೌರವ್ವ ಅವರ ಮೇಲೂ ಬಡಿಗೆಯಿಂದ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿದ್ದಾರೆ. ಅಲ್ಲದೆ, ಸಂಜೆ ಕುಡಗೋಲು ತೆಗೆದುಕೊಂಡು ಬಂದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿಲಾಗಿದೆ. ಬೈಟ್-ಶೋಭಾ
ಈ ಅಮಾನುಷವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಕುರಿತು ಸಂತ್ರಸ್ತ ರವಿ ಕಲ್ಲಪ್ಪ ಪೂಜಾರಿ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ಅಕ್ರಮ ಮರಳು ದಂಧೆಕೋರರನ್ನು ಹಾಗೂ ಹಲ್ಲೆಗೈದ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಕುಟುಂಬವು ಆಗ್ರಹಿಸಿದೆ.

Tags:

error: Content is protected !!