ಖಾನಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸುಮಾರು 700 ಗ್ರಾಂ ತೂಕದ ಗಾಂಜಾ, ಅಂದಾಜು 15 ಸಾವಿರ ರೂ. ಮೌಲ್ಯದ ಮಾಲು ಹಾಗೂ ಗಾಂಜಾ ಮಾರಾಟದಿಂದ ಬಂದಿದ್ದ 540 ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ನೌಶಾದ್ ಮೆಹಬೂಬ್ ಸನದಿ (ವಯಸ್ಸು 42, ಹಿರೇಹಟ್ಟಿಹೊಳಿ, ತಾ. ಖಾನಾಪೂರ) ಎಂದು ಗುರುತಿಸಲಾಗಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ 4, 2026ರಂದು ಮಧ್ಯಾಹ್ನ 1ರಿಂದ 2.55 ಗಂಟೆಯ ಅವಧಿಯಲ್ಲಿ, ಹಿರೇಹಟ್ಟಿಹೊಳಿ ಗ್ರಾಮದ ವ್ಯಾಪ್ತಿಯ ಗಾಡಿಕೊಪ್ಪ ಕ್ರಾಸ್ ಸಮೀಪ, ಪಾರಿಶವಾಡ–ಎಂ.ಕೆ. ಹುಬ್ಬಳ್ಳಿ ಮಾರ್ಗದ ಪಕ್ಕದಲ್ಲಿರುವ ಹೊಲಕ್ಕೆ ತೆರಳುವ ಕಚ್ಚಾ ರಸ್ತೆಯಲ್ಲಿ ಆರೋಪಿ ಮೋಟಾರ್ಸೈಕಲ್ನಲ್ಲಿ ಬಂದು ನಿಂತಿದ್ದನು. ಈ ವೇಳೆ ಆತ ಗಾಂಜಾ ಮಾರಾಟ ಮಾಡುತ್ತಿದ್ದದ್ದು ಪೊಲೀಸರ ಗಮನಕ್ಕೆ ಬಂದಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯಿಂದ 700 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಬಂದಿದ್ದ 540 ರೂ. ನಗದು ಸೇರಿದಂತೆ ಒಟ್ಟು ಸುಮಾರು 15 ಸಾವಿರ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
