”ಸರ್ಕಾರದ ಕೆಲಸ ದೇವರ ಕೆಲಸ” – ಇದು ಪ್ರತಿಯೊಂದು ಸರ್ಕಾರಿ ಕಚೇರಿ ಮೇಲಿರುವ ಪವಿತ್ರ ವಾಕ್ಯ. ಆದರೆ ಖಾನಾಪುರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿಯಲ್ಲಿ ಈ ವಾಕ್ಯಕ್ಕೆ ಕನಿಷ್ಠ ಗೌರವವೂ ಉಳಿದಿಲ್ಲವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಬೀಡಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಖಾಸಗಿ ಸಂಸ್ಥೆಯೊಂದರ ಶಿಬಿರ/ಕಾರ್ಯಕ್ರಮ ನಿಯಮಬಾಹಿರವಾಗಿ ನಡೆದಿರುವ ಬಗ್ಗೆ ‘ಇನ್ ನ್ಯೂಸ್’ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಚುನಾಯಿತ ಪ್ರತಿನಿಧಿಗಳು ಮತ್ತು ಪಿಡಿಒ ಕುಳಿತುಕೊಳ್ಳಬೇಕಾದ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಬಿಂದಾಸ್ ಆಗಿ ದರ್ಬಾರ್ ನಡೆಸಿದ ದೃಶ್ಯಗಳು ರಾಜ್ಯದ ಗಮನ ಸೆಳೆದಿದ್ದವು.

ಆದರೆ, ದುರಂತವೆಂದರೆ ವರದಿ ಪ್ರಸಾರವಾಗಿ ದಿನಗಳು ಕಳೆದರೂ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ! ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಓ) ರಮೇಶ್ ಮೇತ್ರಿ ಅವರನ್ನು ಈ ಕುರಿತು ಪ್ರಶ್ನಿಸಿದರೆ, ಜವಾಬ್ದಾರಿಯುತ ಉತ್ತರ ನೀಡುವ ಬದಲು ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ. ಹಾಗಾದರೆ ಸರ್ಕಾರಿ ಕಚೇರಿಯನ್ನು ಖಾಸಗಿ ಸಂಸ್ಥೆಗಳ ದುರ್ಬಳಕೆಗೆ ಬಿಟ್ಟುಕೊಡಲು ಈ ಅಧಿಕಾರಿಗಳೇ ಸೂತ್ರಧಾರರೇ?
ವರದಿ ಪ್ರಸಿರವಾದರೂ ಪಿಡಿಓ ಮತ್ತು ಖಾಸಗಿ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳದಿರಲು ಕಾರಣವೇನು? ಇಓ ರಮೇಶ್ ಮೇತ್ರಿ ಅವರ ಮೌನ ಹಾಗೂ ಹಾರಿಕೆ ಉತ್ತರದ ಹಿಂದೆ ಯಾರ ಒತ್ತಡವಿದೆ?
ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಮೋಜು -ಮಸ್ತಿಗೆ ಅಥವಾ ಪ್ರಚಾರಕ್ಕೆ ಬಳಕೆಯಾಗಲು ಬಿಡುವುದು ಕೇವಲ ನಿಯಮಬಾಹಿರವಲ್ಲ, ಅದು ಸಾರ್ವಜನಿಕ ಆಡಳಿತಕ್ಕೆ ಎಸಗುವ ದ್ರೋಹ, ಇಷ್ಟೇಲ್ಲಾ ಸಾಕ್ಷ್ಯಾಧಾರಗಳು ಸಿಕ್ಕರೂ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳದೇ ಹೋದರೆ, ಸಾರ್ವಜನಿಕರಿಗೆ ಕಾನೂನು ಮತ್ತು ವ್ಯವಸ್ಥೆಯ ಮೇಲಿರುವ ನಂಬಿಕೆ ಹೊರಟುಹೋಗುತ್ತದೆ
ಮಾನ್ಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಅವರು ತಕ್ಷಣವೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಬೀಡಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಹಾರೈಕೆ ಉತ್ತರ ನೀಡುತ್ತಿರುವ ತಾಲೂಕು ಇಓ ರಮೇಶ್ ಮೇತ್ರಿ ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಅಲ್ಲಿಯವರೆಗೆ ಇನ್ ನ್ಯೂಸ್ ಈ ವಿಷಯವನ್ನು ಬಿಡದೇ ಬೆನ್ನತ್ತಲಿದೆ
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ
