Khanapur

ಖಾನಾಪುರ: ೨೫ ತೊಲೆ ಚಿನ್ನದ ವಿವಾದ – ಅ.೫ರಿಂದ ಕೆ.ಎಸ್. ದಾಮಲೆ ಜ್ಯುವೆಲರ್ಸ್ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

Share

ಖಾನಾಪುರದಲ್ಲಿ ಹತ್ತು ವರ್ಷಗಳ ಹಳೆಯ ೨೫ ತೊಲೆ ಚಿನ್ನದ ಆಭರಣಗಳ ವ್ಯವಹಾರದ ವಿವಾದ ಬಗೆಹರಿಯದ ಹಿನ್ನೆಲೆಯಲ್ಲಿ, ತಮ್ಮ ಚಿನ್ನ ಮರಳಿ ನೀಡುವಂತೆ ಆಗ್ರಹಿಸಿ ರುಕ್ಮಣಾ ಝುಂಜವಾಡಕರ ಅವರು ಅಕ್ಟೋಬರ್ ೫ರಿಂದ ಜ್ಯುವೆಲರ್ಸ್ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

೨೦೧೬ರಲ್ಲಿ ವೈಯಕ್ತಿಕ ಆರ್ಥಿಕ ತೊಂದರೆಯ ಸಂದರ್ಭದಲ್ಲಿ ರುಕ್ಮಣಾ ಝುಂಜವಾಡಕರ ಅವರು ಸರಾಫ್ ವ್ಯಾಪಾರಿ ಕೇದಾರ ದಾಮಲೆ ಬಳಿ ೨೫ ತೊಲೆ ಚಿನ್ನದ ಆಭರಣಗಳನ್ನು ಅಡವಿಟ್ಟು ₹೫ ಲಕ್ಷ ಬಡ್ಡಿಗೆ ಪಡೆದಿದ್ದರು. ಪಡೆದ ಹಣವನ್ನು ಬಡ್ಡಿ ಸಮೇತ ಒಂದು ತಿಂಗಳಲ್ಲೇ ಮರುಪಾವತಿಸಿದರೂ, ಲಾಕರ್‌ನಲ್ಲಿವೆ ಎಂಬ ನೆಪ ಹೇಳಿ ಇದುವರೆಗೆ ಆಭರಣಗಳನ್ನು ಹಿಂತಿರುಗಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ತಾಲ್ಲೂಕಿನ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ರಾಜಿ-ಸಂಧಾನ ಸಭೆಗಳು ನಡೆದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆ ಸತ್ಯವೆಂದು ನಿರೂಪಿಸಲು ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸವಾಲು ಹಾಕಿರುವ ಅವರು, ಅಕ್ಟೋಬರ್ ೫ರಿಂದ ಖಾನಾಪುರದ ಕೆ.ಎಸ್. ದಾಮಲೆ ಜ್ಯುವೆಲರ್ಸ್ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ಸುದ್ದಿಗೋಷ್ಠಿಯ ವೇಳೆ ಪತ್ರಕರ್ತರು ದೂರವಾಣಿ ಮೂಲಕ ಕೇದಾರ ದಾಮಲೆ ಅವರನ್ನು ಸಂಪರ್ಕಿಸಿದಾಗ, ಕುಟುಂಬದೊಂದಿಗೆ ಚರ್ಚಿಸಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ. ಇನ್ನು ಹೋರಾಟಕ್ಕೆ ಮುಂದಾಗಿರುವ ಝುಂಜವಾಡಕರ ಅವರು ತಮ್ಮ ಹಾಗೂ ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ತಮಗೆ ಅಥವಾ ಕುಟುಂಬಕ್ಕೆ ಯಾವುದೇ ಅನಾಹುತ ಸಂಭವಿಸಿದರೆ ಕೇದಾರ ದಾಮಲೆ ಕುಟುಂಬವೇ ನೇರ ಹೊಣೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಖಾನಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Tags:

error: Content is protected !!