Belagavi

ರಾಮ ಹಾಗೂ ಗಾಂಧಿ ಟೋಪಿ ದೇಶದ ಪ್ರತಿಯೊಬ್ಬರ ಸೌಭಾಗ್ಯ; ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ!

Share

ರಾಮ ಹಾಗೂ ಗಾಂಧಿ ಟೋಪಿ ಯಾರೊಬ್ಬರ ಸ್ವತ್ತಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಾಂಧಿ ಜಯಂತಿ ಹಾಗೂ ವ್ಯಸನಮುಕ್ತ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ , ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ , ಪ್ರಗತಿ ಬಂಧು, ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಳಗಾವಿ ಜಿಲ್ಲೆ ಮತ್ತು ಜಿಲ್ಲಾ ವ್ಯಾಪ್ತಿಯ ನವಜೀವನ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ, ಪರಮ ಪೂಜ್ಯ ರಾಜರ್ಷಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ|| ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದೊಂದಿಗೆ, ಬೆಳಗಾವಿಯ ಹಲಗಾ ತಾಲ್ಲೂಕಿನ ಸುವರ್ಣ ಗಾರ್ಡನ್ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಜನಜಾಗೃತಿ ಜಾಥಾ ಮತ್ತು ಗಾಂಧೀ ಸ್ಮೃತಿ ಹಾಗೂ ಪಾನ ಮುಕ್ತರ ಅಭಿನಂದನೆ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಹಾತ್ಮ ಗಾಂಧೀಜಿಯವರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸತ್ಯ, ಅಹಿಂಸೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕರು ಎಂದು ಸ್ಮರಿಸಿದರು. ಗಾಂಧೀಜಿಯವರ ಆದರ್ಶಗಳನ್ನು ಕೇವಲ ಪಠ್ಯದಲ್ಲಿ ಕಲಿಯದೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮುಂದುವರಿದು ಮಾತನಾಡಿದ ಅವರು, ಗಾಂಧೀಜಿಯವರು ಕೊನೆಯ ಉಸಿರಿನಲ್ಲಿಯೂ ‘ಹೇ ರಾಮ್’ ಎಂದಿದ್ದನ್ನು ಸ್ಮರಿಸಿ, ರಾಮನು ಬಿಜೆಪಿಗರ ಸ್ವತ್ತಲ್ಲ; ಬದಲಾಗಿ ರಾಮ ಹಾಗೂ ಗಾಂಧಿ ಟೋಪಿಯು ದೇಶದ ಪ್ರತಿಯೊಬ್ಬರ ಹಾಗೂ ಕಾಂಗ್ರೆಸ್ ಪಕ್ಷದ ಸೌಭಾಗ್ಯ ಮತ್ತು ಮರ್ಯಾದೆಯ ಪ್ರತೀಕವಾಗಿದೆ ಎಂದು ತಿರುಗೇಟು ನೀಡಿದರು.

ಇದೇ ವೇಳೆ ವ್ಯಸನಮುಕ್ತತೆಯ ಮಹತ್ವವನ್ನು ವಿವರಿಸಿದ ಸಚಿವರು, ವ್ಯಸನಗಳು ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಕುಟುಂಬದ ಸುಂದರ ಕ್ಷಣಗಳಿಗೆ ಕೊಡಲಿಪೆಟ್ಟಿನಂತೆ ಪರಿಣಮಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ವ್ಯಸನಗಳಿಂದ ದೂರವಿದ್ದು ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುವ ಉತ್ತಮ ಚಟಗಳನ್ನು ರೂಢಿಸಿಕೊಳ್ಳಿ ಎಂದು ಯುವಜನತೆಗೆ ಸಲಹೆ ನೀಡಿದರು. ವ್ಯಸನದಿಂದ ಹೊರಬರಲು ದೃಢಮನಸ್ಸು ಹಾಗೂ ಕುಟುಂಬದ ಬೆಂಬಲ ಅತ್ಯಗತ್ಯ ಎಂದ ಅವರು, ಪಾನಮುಕ್ತರಾಗಿ ಹೊಸ ಜೀವನ ಆರಂಭಿಸುತ್ತಿರುವವರನ್ನು ಅಭಿನಂದಿಸಿದರು.

ಪೂಜ್ಯ ಶ್ರೀ ಅಡವೇಶ್ವರ ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದ ಈ ಸಮಾರಂಭದಲ್ಲಿ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ. ಜಿ.ಆರ್. ಸೋನೇರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ ಪಾನ ಮುಕ್ತರಿಗೆ ಅಭಿನಂದನೆ ಸಲ್ಲಿಸಿದರು. ಪ್ರಾದೇಶಿಕ ನಿರ್ದೇಶಕಿ ದಯಾಪೀಲ, ಡಾ. ಶ್ರೀಕಾಂತ್ ಬಿ.ಎನ್. ಸೇರಿದಂತೆ ಹಲವು ಗಣ್ಯರು ಹಾಗೂ ವಿವಿಧ ಒಕ್ಕೂಟಗಳ ಪ್ರಮುಖರು ಉಪಸ್ಥಿತರಿದ್ದರು.

Tags:

error: Content is protected !!