ಪ್ರಸಕ್ತ ವರ್ಷ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿರುವುದರಿಂದ ರೈತರ ಬೆಳೆಗಳು ಸಂಕಷ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಫ್ಆರ್ಪಿ ದರವನ್ನು ಹೆಚ್ಚಿಸಿ ಪ್ರತಿ ಟನ್ ಕಬ್ಬಿಗೆ ₹5,500 ಹಾಗೂ ಎಥೆನಾಲ್ಗೆ ಪ್ರತಿ ಲೀಟರ್ಗೆ ₹70 ದರ ನಿಗದಿಪಡಿಸುವವರೆಗೆ ಹಸಿರು ಸೇನೆ ಹಾಗೂ ಸ್ವಾಭಿಮಾನಿ ರೈತ ಸಂಘಟನೆಗಳ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹಸಿರು ಸೇನೆ ರೈತ ಸಂಘಟನೆಯ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಹೇಳಿದರು.

ಕಾಗವಾಡದ ವಿಠ್ಠಲ-ರುಕ್ಮಿಣಿ ಮಂದಿರದ ಸಭಾಭವನದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಸೋಮವಾರ, ಅ.12ರಂದು ದೆಹಲಿಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ರೈತರ ಪರವಾಗಿ ಸೂಕ್ತ ನಿರ್ಣಯ ಕೈಗೊಳ್ಳದಿದ್ದರೆ ಅ.13ರಿಂದ ರಾಜ್ಯದ ಎಲ್ಲ ಟೋಲ್ಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.
ಸ್ವಾಭಿಮಾನಿ ರೈತ ಸಂಘಟನೆಯ ಅಧ್ಯಕ್ಷ ಹಾಗೂ ಮಾಜಿ ಸಂಸದ ರಾಜು ಶೆಟ್ಟಿ ಮಾತನಾಡಿ, ದೇಶದಲ್ಲಿ ಸಕ್ಕರೆ ಉತ್ಪಾದಿಸುವ ರಾಜ್ಯಗಳ ಪೈಕಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳು ಅರ್ಧಕ್ಕಿಂತ ಅಧಿಕ ಪ್ರಮಾಣದ ಸಕ್ಕರೆ ಉತ್ಪಾದಿಸುತ್ತಿವೆ. ದೇಶದಲ್ಲಿ ಸಕ್ಕರೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂಬರುವ ದೀಪಾವಳಿ ವೇಳೆಗೆ ಸಕ್ಕರೆ ಬೆಲೆ ಕೆ.ಜಿಗೆ ₹100 ತಲುಪುವ ಸಾಧ್ಯತೆ ಇದೆ. ಭವಿಷ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳನ್ನು ಕೂಡಲೇ ಆರಂಭಿಸುವಂತೆ ಸೂಚಿಸುತ್ತಿದೆ ಎಂದರು.
ಸಕ್ಕರೆ ಕಾರ್ಖಾನೆಗಳನ್ನು ಕೂಡಲೇ ಆರಂಭಿಸಿದರೆ ಕಬ್ಬಿನ ಇಳುವರಿ ಹಾಗೂ ತೂಕದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದ್ದು, ರೈತರಿಗೆ ಪ್ರತಿ ಎಕರೆಗೆ ಸುಮಾರು ₹22 ಸಾವಿರ ನಷ್ಟವಾಗಲಿದೆ. ಆದ್ದರಿಂದ ಕಾರ್ಖಾನೆಗಳನ್ನು ಆರಂಭಿಸಬಾರದು ಎಂದು ಒತ್ತಾಯಿಸುತ್ತಿದ್ದು, ಕೇಂದ್ರ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಶನಿವಾರ, ಅ.10ರಂದು ಜೈಸಿಂಗ್ಪುರ ನಗರದಲ್ಲಿ ರೈತರ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪಾ ಪೂಜಾರಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಸುಮಾರು 5 ಲಕ್ಷ ರೈತರು ಒಂದೆಡೆ ಸೇರಿದ್ದರು. ಇದನ್ನು ಗಮನಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಶಕ್ತಿಯನ್ನು ಅರಿತುಕೊಂಡಿವೆ. ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಅವರು ರೈತರನ್ನು ಅವಮಾನಿಸಿದ್ದಾರೆ. ನಾವು ಬೆಂಗಳೂರಿಗೆ ಬರುವಾಗ ಅವರು ಅಲ್ಲಿಂದ ತೆರಳಿದ್ದರು. ಶಶಿಕಾಂತ್ ಗುರೂಜಿ ಅವರು ಮಾತನಾಡಿದ್ದ ವಿಚಾರವನ್ನು ಮುಂದಿಟ್ಟುಕೊಂಡು ನಮ್ಮ ವಿರುದ್ಧ ಆರೋಪ ಮಾಡಲಾಗಿದೆ ಎಂದರು.
ಅ.12ರಂದು ದೆಹಲಿಗೆ ನಮ್ಮನ್ನು ಸಭೆಗೆ ಆಹ್ವಾನಿಸಲಾಗಿದೆ. ಅ.11ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಅ.13ರಿಂದ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಹಸಿರು ಸೇನೆ ರೈತ ಸಂಘಟನೆಯ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಮಾತನಾಡಿ, ಕೇಂದ್ರದ ಮೋದಿ ಸರ್ಕಾರ ರೈತರ ಪರವಾಗಿ ಯಾವುದೇ ಸೂಕ್ತ ನಿರ್ಣಯ ಕೈಗೊಂಡಿಲ್ಲ. ಈ ವರ್ಷ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಅದರ ಪರಿಣಾಮ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಮಾಡಿರುವ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇವೆ. ರೈತರಿಗಾಗಿ ಹೋರಾಟ ನಡೆಸುವ ಸಂದರ್ಭದಲ್ಲಿ ಇಂತಹ ಅವಮಾನಗಳನ್ನು ಸಹಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಸಭೆಯಲ್ಲಿ ಸ್ವಾಭಿಮಾನಿ ರೈತ ಸಂಘದ ಕಾರ್ಯದರ್ಶಿ ರಾಜೇಂದ್ರ ಗಡ್ಡನವರ್, ಬಸಪ್ಪ ಚನ್ನಗುಂಡಿ, ಕಾಗವಾಡ ತಾಲೂಕು ರೈತ ಸಂಘದ ಅಧ್ಯಕ್ಷ ಶರತ್ ಪಾಟೀಲ್, ನ್ಯಾಯವಾದಿ ಕಾಕಾ ಪಾಟೀಲ್, ರಾಹುಲ್ ಕಟಗೇರಿ, ಮಹಾದೇವ ಉದಗಾಂವೆ, ಅಜಿತ್ ಕರವ, ಕರವೇ ಕಾರ್ಯಕರ್ತರು ಸೇರಿದಂತೆ ರೈತ ಸಂಘಟನೆಗಳ ಅನೇಕ ಮುಖಂಡರು ಹಾಗೂ ಯುವಕರು ಪಾಲ್ಗೊಂಡು ಸಭೆಯನ್ನು ಯಶಸ್ವಿಗೊಳಿಸಿದರು.
ಸುಕುಮಾರ್ ಬನ್ನುರೆ ಇನ್ನನ್ಯೂಸ ಕಾಗವಾಡ
