Belagavi

ಬೆಳಗಾವಿಯ ಕಾಂಗಲೆ ಗಲ್ಲಿಗೆ ಆಗಮಿಸಿದ ಶಕ್ತಿದೇವತೆ ಸುಳೇಭಾವಿ ಶ್ರೀ ಮಹಾಲಕ್ಷ್ಮೀ

Share

ಈ ಬಾರಿಯ ದಸರಾ ಹಬ್ಬದ ಸಂಭ್ರಮಕ್ಕೆ ನಮ್ಮ ನೆಚ್ಚಿನ ಬೆಳಗಾವಿ ನಗರವು ಮತ್ತಷ್ಟು ಕಳೆಗಟ್ಟಿದೆ. ವಿಶೇಷವಾಗಿ ನಗರದ ಕಾಂಗಲೆ ಗಲ್ಲಿ ದಸರಾ ಮಹೋತ್ಸವ ಭಕ್ತರನ್ನು ಕೈಬೀಸಿ ಕರೆಯುತ್ತಿವೆ. ಬೆಳಗಾವಿಯ ಶಕ್ತಿದೇವತೆ ಸುಳೇಭಾವಿಯ ಶ್ರೀ ಮಹಾಲಕ್ಷ್ಮೀಯ ಅವತಾರದಲ್ಲಿರುವ ದುರ್ಗೆಯ ಪ್ರತಿರೂಪ ಭಕ್ತರಲ್ಲಿ ಭಾರಿ ಶ್ರದ್ಧೆಯನ್ನು ಮೂಡಿಸಿದೆ.

ಬೆಳಗಾವಿ ನಗರದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಕಿರೀಟವಿಟ್ಟಂತೆ ಈ ಬಾರಿಯ ದಸರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ. ನಗರದ ಕಾಂಗಲೆ ಗಲ್ಲಿಯ ಏಕತಾ ಯುವಕ ಮಂಡಳ 15ನೇ ವರ್ಷದ ಸಂಭ್ರಮದ ಅಂಗವಾಗಿ, ಸುಳೇಭಾವಿಯ ಶ್ರೀ ಮಹಾಲಕ್ಷ್ಮೀ ದೇವಿಯ ಮಾದರಿಯ ಮನಮೋಹಕ ರೂಪಕವನ್ನು ಸಿದ್ಧಪಡಿಸಿದೆ. ಘಟಸ್ಥಾಪನೆಯ ದಿನದಂದು ಶ್ರೀದೇವಿಯ ಮೂರ್ತಿಯ ಭವ್ಯ ಮೆರವಣಿಗೆಯೂ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಪಾರಂಪರೀಕ ವಾದ್ಯಮೇಳಗಳು, ಜಾನಪದ ಕಲಾಮೇಳಗಳ ಪ್ರದರ್ಶನವು ಮೆರವಣಿಗೆಯ ಅಂದವನ್ನು ಹೆಚ್ಚಿಸಿದವು.

ದೂರದ ಸುಳೇಭಾವಿಗೆ ತೆರಳಲಾಗದ ಭಕ್ತರು ಸ್ಥಳದಲ್ಲೇ ದೇವಿಯ ದರ್ಶನ ಪಡೆಯಲು ಇದು ಸುವರ್ಣಾವಕಾಶವಾಗಿದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನವರಾತ್ರಿ ನಿಮಿತ್ತ ಲಲಿತಾ ಪಂಚಮಿಯಂದು ವಿಶೇಷ ಕುಂಕುಮಾರ್ಚನೆ ಮತ್ತು ದುರ್ಗಾಷ್ಟಮಿಯ ದಿನದಂದು ಪವಿತ್ರ ಚಂಡಿ ಹೋಮ ಜರುಗಲಿದೆ. ವಿಶೇಷವೆಂದರೆ, ಅಂದು ಸುಮಾರು 25,000ಕ್ಕೂ ಹೆಚ್ಚು ಭಕ್ತರಿಗಾಗಿ ಬೃಹತ್ ಮಹಾಪ್ರಸಾದದ ವ್ಯವಸ್ಥೆಯನ್ನು ಮಂಡಳಿಯ ವತಿಯಿಂದ ಅಚ್ಚುಕಟ್ಟಾಗಿ ಮಾಡಲಾಗಿದೆ. ಭಾನುವಾರದಂದು ಏರ್ಪಡಿಸಲಾದ ಬೃಹತ್ ಮಹಾಪ್ರಸಾದದಲ್ಲಿ ಸುಮಾರು 18ರಿಂದ 20 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ.

ವಿಜಯದಶಮಿಯ ದಿನದಂದು ವಿಜೃಂಭಣೆಯ ದೇವಿಯ ವಿಸರ್ಜನಾ ಮೆರವಣಿಗೆಯೊಂದಿಗೆ ಈ ಮಹೋತ್ಸವವು ಸಂಪನ್ನಗೊಳ್ಳಲಿದೆ. ಕಾಂಗಲೆ ಗಲ್ಲಿಯ ಸೆಕ್ರೆಟರಿ ಸದಾನಂದ ಹಾವಳ ಹಾಗೂ ಮಿತಿಯ ಪ್ರಮುಖರಾದ ಶ್ರದ್ಧಾ ಬಾಳಕೃಷ್ಣ ತುಪೇನಗಟ್ಟಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ನಗರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.

Tags:

error: Content is protected !!