ಕಳೆದ ಮೂರು ದಶಕಗಳಿಂದ ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಸೇವೆ ಸಲ್ಲಿಸುತ್ತಿರುವ ಯಕ್ಸಂಬಾದ ಶ್ರೀ ಜ್ಯೋತಿ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ಸದಸ್ಯರಿಗೆ ಶೇ. 10ರಷ್ಟು ಲಾಭಾಂಶ ಹಾಗೂ ಸಿಬ್ಬಂದಿಗೆ ಶೇ 8 ರಷ್ಟು ಬೋನಸ್ ವಿತರಿಸಲು ನಿರ್ಧರಿಸಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ವಿಶ್ವನಾಥ ಪೇಟಕರ ತಿಳಿಸಿದರು.
ತಾಲೂಕಿನ ಯಕ್ಸಂಬಾದಲ್ಲಿರುವ ಸಂಘದ ಮುಖ್ಯ ಆಡಳಿತ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
2024-25ನೇ ಸಾಲಿನ ಒಟ್ಟು ₹2,38,98,600 ಷೇರು ಮೊತ್ತದ ಮೇಲೆ ಶೇ. 10ರಂತೆ ₹23,89,860 ಲಾಭಾಂಶವನ್ನು ಅನುಮೋದಿಸಲಾಗಿದೆ. ರಾಜ್ಯಾದ್ಯಂತ ಇರುವ ಸಂಘದ 43,176 ಸದಸ್ಯರ ಬ್ಯಾಂಕ್ ಖಾತೆಗಳಿಗೆ ಲಾಭಾಂಶದ ಮೊತ್ತವನ್ನು ನೇರವಾಗಿ ಜಮಾ ಮಾಡಲಾಗುವುದು ಎಂದು ಹೇಳಿದರು.
ಸಂಸ್ಥೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಿಬ್ಬಂದಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 417 ಸಿಬ್ಬಂದಿಗೆ ಒಟ್ಟು ₹53,78,449 ಬೋನಸ್ ವಿತರಿಸಲಾಗುವುದು. ಈ ಮೊತ್ತವನ್ನು ಸಿಬ್ಬಂದಿಯ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ 1994ರಲ್ಲಿ ಆರಂಭಗೊಂಡ ಈ ಸಹಕಾರಿ ಸಂಘವು ಕಳೆದ 32 ವರ್ಷಗಳಿಂದ ಸದಸ್ಯರು ಮತ್ತು ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು ಮುನ್ನಡೆಯುತ್ತಿದೆ. ಜನಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದರೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಬಾಬುರಾವ ಮಾಳಿ, ಜ್ಯೋತಿಪ್ರಸಾದ ಜೊಲ್ಲೆ,ಜಗದೀಶ ಲಕ್ಷ್ಮಣ ಹಿಂಗ್ಲಜೆ, ಜಗದೀಶ ಕಲ್ಲಪ್ಪ ಜಾಧವ, ರಾವಸಾಬ ಶಿವರಾಮ ಬಾಕಳೆ, ಪವನ ಸುರೇಶ ಪಾಟೀಲ, ಕಲ್ಲಪ್ಪ ಭೀಮಾ ನಾಯಿಕ, ಬಾಳಾಸಾಬ ಕಲ್ಲಪ್ಪ ಶಿಂದೆ, ಪ್ರಧಾನ ವ್ಯವಸ್ಥಾಪಕ ಸಂತೋಷ ಎಸ್. ಪಾಟೀಲ, ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹಾಂತೇಶ ಬಿ. ಶಿರೋಳ, ಲೆಕ್ಕಾಧಿಕಾರಿ ತಾನಾಜಿ ಶಂಕರ ಶಿಂದೆ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಂತೋಷ ಪೂಜಾರಿ ಉಪಸ್ಥಿತರಿದ್ದರು.
