ಕರೋಶಿ ರಸ್ತೆಯ ಢಾಲಾಯತ್ ತೋಟದ ಬಳಿ ಇಂದು ಸಂಜೆ ಬೈಕ್ ಹಾಗೂ ಗೂಡ್ಸ್ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ವಡಗೋಳ ನಿವಾಸಿ ಅಮರ್ ಸನದಿ ಎಂಬುವವರು ಗೂಡ್ಸ್ ವಾಹನದಲ್ಲಿ ಬೆಂಗಳೂರಿನಿಂದ ಚಿಕ್ಕೋಡಿಯತ್ತ ತೆರಳುತ್ತಿದ್ದರು. ಕರೋಶಿ ಘಟಗಿ ಬಸವೇಶ್ವರ ದೇವಸ್ಥಾನದ ಘಾಟ್ ಇಳಿದು ಢಾಲಾಯತ್ ತೋಟದ ಬಳಿ ಬರುತ್ತಿದ್ದಂತೆ, ಚಿಕ್ಕೋಡಿಯಿಂದ ಕರೋಶಿಯತ್ತ ತೆರಳುತ್ತಿದ್ದ ಬೈಕ್ ಗೂಡ್ಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ.
ಈ ಅಪಘಾತದ ತೀವ್ರತೆಗೆ ಬೈಕ್ ಸವಾರ, ಚಿಕ್ಕೋಡಿಯ ಮೆಹಬೂಬ್ ನಗರದ ನಿವಾಸಿ ಸಮೀರ್ ಶಬ್ಬೀರ್ ಮುಲ್ಲಾ (ಯುವಕ) ಗಂಭೀರವಾಗಿ ಗಾಯಗೊಂಡಿದ್ದು, ಅವರ ಕಾಲಿಗೆ ಬಲವಾದ ಪೆಟ್ಟಾಗಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಗಾಯಾಳುವನ್ನು ಚಿಕ್ಕೋಡಿಯ ಖಾಸಗಿ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಚಿಕ್ಕೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಹಾಗೂ ಟ್ರಾಫಿಕ್ ಸುಗಮಗೊಳಿಸಿದ್ದಾರೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
