Chikkodi

ದೆಹಲಿ ಸಭೆಯಲ್ಲಿ ರೈತರ ಬೇಡಿಕೆ ಈಡೇರದಿದ್ದರೆ ಅ. 13ರಂದು ರಾಜ್ಯಾದ್ಯಂತ ರಸ್ತೆ ತಡೆ – ಚಿಕ್ಕೋಡಿಯಲ್ಲಿ ರೈತ ಸಂಘ ಎಚ್ಚರಿಕೆ

Share

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿನ ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅಕ್ಟೋಬರ್ 13ರಂದು ರಾಜ್ಯಾದ್ಯಂತ ಪ್ರಮುಖ ಹೆದ್ದಾರಿ ತಡೆದು ತೀವ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮನೋಜ ಮನಗೂಳಿ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 29ರಂದು ಹುಬ್ಬಳ್ಳಿಯಲ್ಲಿ ನಡೆದ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದೆಹಲಿಯಲ್ಲಿ ಮುಕ್ತ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಅದರಂತೆ ಇದೇ ತಿಂಗಳ 12ರಂದು ಮಧ್ಯಾಹ್ನ 3:00 ಗಂಟೆಗೆ ದೆಹಲಿಯ ಕೃಷಿ ಭವನದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿದೆ ಎಂದರು.

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕನಿಷ್ಠ ಬೆಂಬಲ ಬೆಲೆ (MSP) ಎಫ್‌ಆರ್‌ಪಿ (FRP) ಹಾಗೂ ಎಥನಾಲ್ ನೀತಿಗೆ ಸಂಬಂಧಿಸಿದಂತೆ ಕಡ್ಡಾಯ ಮತ್ತು ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ ರಾಜ್ಯದಲ್ಲಿ ಶೇ. 100ರಷ್ಟು ಎಥನಾಲ್ ಅನ್ನು ಖರೀದಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಒಟ್ಟು 30ರಿಂದ 50 ಕಬ್ಬು ಬೆಳೆಗಾರರು ಹಾಗೂ ರೈತ ಮುಖಂಡರ ಪ್ರಮುಖ ನಿಯೋಗವು ಈ ದೆಹಲಿ ಸಭೆಯಲ್ಲಿ ಭಾಗವಹಿಸಲಿದೆ.

ದೆಹಲಿಯ ಚರ್ಚೆಯಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಮತ್ತು ಸಾಕಾರಾತ್ಮಕ ಸ್ಪಂದನೆ ಸಿಗದಿದ್ದರೆ, ರಾಜ್ಯ ಅಧ್ಯಕ್ಷರಾದ ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ್ ಗುರೂಜಿ ಅವರ ನಿರ್ದೇಶನದಂತೆ ಅಕ್ಟೋಬರ್ 13ರಂದು ರಾಜ್ಯಾದ್ಯಂತ ಪ್ರಮುಖ ಹೆದ್ದಾರಿಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಪ್ರಮುಖ ರೈತ ಮುಖಂಡರು ಉಪಸ್ಥಿತರಿದ್ದರು.

Tags:

error: Content is protected !!