ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ನಲ್ಲಿ ಉದ್ಯೋಗ ಕೊಡಿಸುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಹಾಗೂ ಮಾಜಿ ಸಂಸದ, ಬ್ಯಾಂಕ್ನ ಹಾಲಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದ ಮೇಲೆ ಗ್ರೇಡ್-2 ಉಪತಹಶೀಲ್ದಾರ್ ಅರುಣ ಶ್ರೀಖಂಡೆ ವಿರುದ್ಧ ನಿಪ್ಪಾಣಿ ತಾಲೂಕು ಬಿಜೆಪಿ ಹಾಗೂ ಜೊಲ್ಲೆ ಅಭಿಮಾನಿಗಳಿಂದ ಬೃಹತ್ ಜನಾಕ್ರೋಶ ಮೆರವಣಿಗೆ ಮತ್ತು ಪ್ರತಿಭಟನೆ ನಡೆಯಿತು.
ಆರೋಪಿ ಅಧಿಕಾರಿಯ ವಿರುದ್ಧ ಸೂಕ್ತ ತನಿಖೆ ನಡೆಸಿ, ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಕಾರ್ಯಕರ್ತರು ತೀವ್ರ ಒತ್ತಾಯ ಮಾಡಿದರು.
ನಗರದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಿಂದ ಆರಂಭಗೊಂಡ ಮೆರವಣಿಗೆಯು ಹಳೆ ಪಿ.ಬಿ. ರಸ್ತೆ ಹಾಗೂ ನಗರಸಭೆ ಕಾರ್ಯಾಲಯದ ಮಾರ್ಗವಾಗಿ ತಹಶೀಲ್ದಾರ್ ಕಚೇರಿಯವರೆಗೆ ತಲುಪಿತು. ಮೆರವಣಿಗೆಯುದ್ದಕ್ಕೂ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ವಿವಿಧ ಘೋಷಣೆಗಳನ್ನು ಕೂಗುತ್ತಾ ಶ್ರೀಖಂಡೆ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು. “ಭ್ರಷ್ಟ ಅಧಿಕಾರಿಯನ್ನು ಅಮಾನತುಗೊಳಿಸಿ”, “ಶ್ರೀಖಂಡೆ ಅವರೇನು ಮಾಡಬೇಕು, ತಲೆ ಕೆಳಗೆ ಕಾಲು ಮೇಲೆ” ಎಂಬಿತ್ಯಾದಿ ಆಕ್ರೋಶದ ಘೋಷಣೆಗಳು ಮುಗಿಲುಮುಟ್ಟಿದವು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಯುವ ಹಾಗೂ ಸಾಮಾಜಿಕ ಕಾರ್ಯಕರ್ತ ಬಂಡಾ ಘೋರ್ಪಡೆ, “ಅರುಣ ಶ್ರೀಖಂಡೆ ಅವರು ಬಿಡಿಸಿಸಿ ಬ್ಯಾಂಕ್ನಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಸಾಮಾನ್ಯ ಜನರಿಗೆ ಆಮಿಷವೊಡ್ಡಿದ್ದಾರೆ. ಅಣ್ಣಾಸಾಹೇಬ ಜೊಲ್ಲೆ ಅವರೊಂದಿಗೆ ತಮಗೆ ನಿಕಟ ಸಂಬಂಧವಿದೆ ಎಂದು ಸುಳ್ಳು ಹೇಳಿಕೊಂಡು, ಅವರ ಹೆಸರು ದುರುಪಯೋಗಪಡಿಸಿಕೊಂಡು ಆರ್ಥಿಕ ವಂಚನೆ ಎಸಗಿದ್ದಾರೆ. ಈ ಕೃತ್ಯದ ಮೂಲಕ ಜೊಲ್ಲೆ ಅವರ ಪ್ರತಿಷ್ಠೆಗೆ ಧಕ್ಕೆ ತರಲು ಹುನ್ನಾರ ನಡೆಸಲಾಗಿದೆ,” ಎಂದು ಗಂಭೀರವಾಗಿ ಆರೋಪಿಸಿದರು.
ಅಲ್ಲದೆ, ಶ್ರೀಖಂಡೆ ಅವರ ಅಕ್ರಮಗಳ ಕುರಿತು ಸಮಗ್ರ ತನಿಖೆಯಾಗಿ ವಾಸ್ತವಾಂಶ ಹೊರಬರಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಸೇವೆಯಿಂದ ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ನಂತರ ನಿಪ್ಪಾಣಿ ತಹಶೀಲ್ದಾರ್ ಸುರೇಶ್ ಮುಂಜೆ ಅವರನ್ನು ಭೇಟಿಯಾದ ನಿಯೋಗವು, ಅರುಣ ಶ್ರೀಖಂಡೆ ಅವರ ಮೇಲಿನ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿತು. ಬಿಜೆಪಿ ಮುಖಂಡರಾದ ಶ್ರೀಕಾಂತ್ ಬನ್ನೆ ಹಾಗೂ ದಾದಾರಾಜೆ ಸರ್ಕಾರ ಮಾತನಾಡಿ, ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಅಗತ್ಯವೆಂದರು.
ಈ ಜನಾಕ್ರೋಶ ಮೆರವಣಿಗೆಯಲ್ಲಿ ಹಾಳಸಿದ್ದನಾಥ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಂ.ಪಿ. ಪಾಟೀಲ, ನಿರ್ದೇಶಕ ಸುಮಿತ್ ಸಾಸಣೆ, ಮಹಾಲಿಂಗ ಕೊಠೀವಾಲೆ, ಸುಹಾಸ್ ಘುಗೆ, ರಮೇಶ್ ಪಾಟೀಲ, ವಿನಾಯಕ ಪಾಟೀಲ, ಪ್ರಕಾಶ್ ಶಿಂಧೆ, ರಾಮಗೊಂಡ ಪಾಟೀಲ, ರಾವಸಾಹೇಬ ಫರಾಳೆ, ಭರತ್ ನಸಲಾಪೂರೆ, ಬಿಜೆಪಿ ನಗರಾಧ್ಯಕ್ಷ ರಾಜು ಗುಂಡೇಶಾ, ಬಾಳಾಸಾಹೇಬ ಕದಮ್, ಉಪನಗರಾಧ್ಯಕ್ಷ ಸುನಿಲ ಪಾಟೀಲ, ಪ್ರಶಾಂತ್ ಕೆಸ್ತಿ, ಯೋಗಿತಾ ಘೋರ್ಪಡೆ, ಬಬನ್ ಹವಲ್ದಾರ್, ಸಂಜಯ ಸ್ವಾಮಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
