Chikkodi

ಹಾಲಿನ ಟೆಂಪೋ ಪಲ್ಟಿ: ಚಾಲಕನಿಗೆ ಗಾಯ, ಹಾಲಿನ ಉತ್ಪನ್ನಗಳು ಹಾನಿ

Share

ಟೈರ್ ದಿಢೀರ್‌‌ ಸ್ಫೋಟಗೊಂಡ ಪರಿಣಾಮ ಹಾಲಿನ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಬ್ಬಿನ ಗದ್ದೆಗೆ ಮಗುಚಿ ಬಿದ್ದ ಘಟನೆ ಸಮೀಪದ ಚಿಕ್ಕೋಡಿ–ಅಂಕಲಿ ರಸ್ತೆಯ ಅಂಕಲಿ ಬಳಿ ನಡೆದಿದೆ.

ಘಟನೆಯಲ್ಲಿ ಟೆಂಪೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಿಕ್ಕೋಡಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ದಾಲ್ಶಿಯಾ’ ಸಂಸ್ಥೆಗೆ ಸೇರಿದ ಹಾಲಿನ ಪ್ಯಾಕೆಟ್ ಹಾಗೂ ಇತರೆ ಡೈರಿ ಉತ್ಪನ್ನಗಳನ್ನು ಹೇರಿಕೊಂಡು ಟೆಂಪೋ ಹಮೀದ್‌ವಾಡದಿಂದ ಅಂಕಲಿ ಕಡೆಗೆ ತೆರಳುತ್ತಿತ್ತು. ವಾಹನವು ಅಂಕಲಿ ಸಮೀಪಿಸುತ್ತಿದ್ದಂತೆ ಮುಂಭಾಗದ ಟೈರ್ ಬ್ಲಾಸ್ಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಪಕ್ಕದಲ್ಲಿದ್ದ ಕಬ್ಬಿನ ತೋಟಕ್ಕೆ ನುಗ್ಗಿ ಮಗುಚಿ ಬಿದ್ದಿದೆ. ಅಪಘಾತದ ರಭಸಕ್ಕೆ ಟೆಂಪೋದಲ್ಲಿದ್ದ ಹಾಲು ಮತ್ತು ಮೊಸರಿನ ಪ್ಯಾಕೆಟ್‌ಗಳು ಸಂಪೂರ್ಣವಾಗಿ ಚೆಲ್ಲಿ ಹಾನಿಗೊಳಗಾಗಿವೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಹಾಲಿನ ಕಂಪನಿಯ ಸಿಬ್ಬಂದಿಗಳು ವಾಹನದಲ್ಲಿದ್ದ ಸರಕುಗಳನ್ನು ತೆರವುಗೊಳಿಸಿದರು. ನಂತರ ರಾತ್ರಿ ತಡವಾಗಿ ಕ್ರೇನ್ ನೆರವಿನಿಂದ ಮಗುಚಿ ಬಿದ್ದಿದ್ದ ಟೆಂಪೋವನ್ನು ರಸ್ತೆಯಿಂದ ತೆರವುಗೊಳಿಸಲಾಯಿತು.

ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿರುವುದರಿಂದ ಈ ರಸ್ತೆಯ ದುರಸ್ತಿ ಕಾರ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ಬಿದ್ದಿದ್ದು, ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯು ತಕ್ಷಣವೇ ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

Tags:

error: Content is protected !!