ತಾಲೂಕಿನ ಅಂಕಲಿ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ನಿಖಿತಾ ಕಂಕಣವಾಡಿ ಅವರು ಅಖಿಲ ಭಾರತ ಮಟ್ಟದಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಹಿರಿಯ ಸಂಶೋಧನಾ ಫೆಲೋಶಿಪ್ (SRF) ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ (AIR-1) ಪಡೆದಿರುವ ಅವರು, ಇದೀಗ ಭಾರತ ಸರ್ಕಾರದ ಜವಳಿ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ರೇಷ್ಮೆ ಮಂಡಳಿಯಲ್ಲಿ (Central Silk Board) ‘ವಿಜ್ಞಾನಿ-ಬಿ’ (Scientist-B) ಹುದ್ದೆಗೆ ನೇಮಕಗೊಂಡಿದ್ದಾರೆ.
ರೇಷ್ಮೆ ಕೃಷಿ (Sericulture) ವಿಷಯದಲ್ಲಿ ಎಂ.ಎಸ್ಸಿ. (ಕೃಷಿ) ಪದವಿ ಪಡೆದಿರುವ ನಿಖಿತಾ ಅವರು, ತಮ್ಮ ಕಠಿಣ ಪರಿಶ್ರಮ ಮತ್ತು ಶೈಕ್ಷಣಿಕ ಶ್ರೇಷ್ಠತೆಯಿಂದ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಸಾಧನೆಯ ಬೆನ್ನಲ್ಲೇ ಪ್ರತಿಷ್ಠಿತ ಕೇಂದ್ರ ರೇಷ್ಮೆ ಮಂಡಳಿಯಲ್ಲಿ ವಿಜ್ಞಾನಿ ಹುದ್ದೆಗೆ ಆಯ್ಕೆಯಾಗಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ.
ಅಂಕಲಿ ಗ್ರಾಮದ ಹೆಮ್ಮೆಯ ಪುತ್ರಿಯ ಈ ಅಸಾಧಾರಣ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು, ಶಿಕ್ಷಕರು ಹಾಗೂ ಚಿಕ್ಕೋಡಿ ಭಾಗದ ಜನರಿಂದ ಹರ್ಷ ವ್ಯಕ್ತವಾಗಿದ್ದು, ವ್ಯಾಪಕ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
