ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ದಿಬ್ಬದಹಳ್ಳಿ ಗ್ರಾಮದಲ್ಲಿ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಿನಗೂಲಿ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶಿಸಿ ದುರ್ಮರಣಕ್ಕೀಡಾಗಿದ್ದಾನೆ. ಟ್ರಾನ್ಸ್‌ಫಾರ್ಮರ್ ಸುತ್ತಲಿನ ಗಿಡಗಂಟಿ ತೆರವುಗೊಳಿಸುವ ವೇಳೆ ಈ ದುರಂತ ಸಂಭವಿಸಿದೆ.
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ದಿಬ್ಬದಹಳ್ಳಿ ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೆಳಗಿಳಿಸಲು ಸುತ್ತಲೂ ಹರಡಿದ್ದ ಗಿಡಗಂಟಿ ಮತ್ತು ಬಳ್ಳಿಗಳನ್ನು ತೆರವುಗೊಳಿಸಲು ಟ್ರಾನ್ಸ್‌ಫಾರ್ಮರ್ ಮೇಲೇರಿದ್ದ ಅರ್ಜುನಚಿನ್ನೇನಹಳ್ಳಿ ಗ್ರಾಮದ ದಿನಗೂಲಿ ಕಾರ್ಮಿಕ ಜಿ. ಬೋರಯ್ಯ (38) ಎಂಬುವವರು ವಿದ್ಯುತ್ ಸ್ಪರ್ಶಿಸಿ ಕಂಬದ ಮೇಲೆಯೇ ನೇತಾಡಿ ದುರ್ಮರಣಕ್ಕೀಡಾಗಿದ್ದಾರೆ. ಕೆಲಸ ಮಾಡುವ ವೇಳೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ನಿರ್ಲಕ್ಷ್ಯ ವಹಿಸಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ವಿದ್ಯುತ್ ಶಾಕ್‌ನಿಂದ ಮೃತ ಬೋರಯ್ಯ ಅವರ ದೇಹ ಸಂಪೂರ್ಣ ಸುಟ್ಟುಹೋಗಿದ್ದು, ಈ ಕುರಿತು ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
