ಸರ್ಕಾರಿ ಸಾರಿಗೆ ಬಸ್‌ನ ಎಕ್ಸಲ್ ಕಟ್ ಆಗಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಬಳಿ ಸಂಭವಿಸಿದೆ.


ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಬಳಿ ಸಂಭವಿಸಿದ ಈ ಘಟನೆಯಲ್ಲಿ, ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಎಕ್ಸಲ್ ಹಠಾತ್ ಕಟ್ ಆದ ಕಾರಣ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಯಾವುದೇ ಗಂಭೀರ ಸ್ವರೂಪದ ಗಾಯಗಳಾಗದಿರುವುದು ಎಲ್ಲರಿಗೂ ನಿರಾಳ ತಂದಿದೆ. ವಿಷಯ ತಿಳಿದ ಕೂಡಲೇ ವಿಜಯನಗರ ಕೆಎಸ್‌ಆರ್‌ಟಿಸಿ ಡಿಸಿ ರಾಜೇಶ್ ಹುದ್ಧಾರ್, ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಹಾಗೂ ತಂಬ್ರಹಳ್ಳಿ ಪಿಎಸ್‌ಐ ನಾಗರಾಜ್ ಅವರು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
