ಗಣೇಶ ಚತುರ್ಥಿಯ ದಿನವೇ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ರೈತರೊಬ್ಬರ ತೋಟದಲ್ಲಿ ಬೆಳೆದ ಪಪ್ಪಾಯಿ ಹಣ್ಣಿನಲ್ಲಿ ಸ್ವಾಮಿಯ ರೂಪ ಮೂಡಿಬಂದಿದ್ದು, ಸ್ಥಳೀಯರಲ್ಲಿ ಭಕ್ತಿ ಹಾಗೂ ಸಂಭ್ರಮ ಮನೆಮಾಡಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಗ್ರಾಮದ 2 ಎಕರೆ ಪಪ್ಪಾಯಿ ತೋಟದ ಮಾಲೀಕ ಪಾಲ್ತೂರ್ ಬಸವರಾಜ್ ಎಂಬುವವರು, ತಮ್ಮ ಸಹೋದರನಿಗೆ ನೀಡಲು ತೋಟದಿಂದ ಹಣ್ಣೊಂದನ್ನು ಕಿತ್ತುಕೊಂಡು ಬಂದಿದ್ದರು. ಆ ಪಪ್ಪಾಯಿ ಹಣ್ಣನ್ನು ಗಮನಿಸಿದಾಗ ಅದರ ಮೇಲ್ಭಾಗದಲ್ಲಿ ಅಚ್ಚರಿಯೆಂಬಂತೆ ಸಾಕ್ಷಾತ್ ಗಣೇಶನ ಆಕೃತಿ ಸ್ಪಷ್ಟವಾಗಿ ಮೂಡಿಬಂದಿರುವುದು ಕಂಡುಬಂದಿದೆ. ಇದನ್ನು ದೈವಿಕ ಸಂಕೇತವೆಂದು ಭಾವಿಸಿದ ಕುಟುಂಬಸ್ಥರು, ಪಪ್ಪಾಯಿಯನ್ನೇ ಗಣೇಶನ ರೂಪವೆಂದು ನಂಬಿ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹಲವು ವರ್ಷಗಳ ಬಳಿಕ ತಮ್ಮ ಕುಟುಂಬದಲ್ಲಿ ಈ ರೀತಿ ಗಣೇಶೋತ್ಸವದ ಸಂಭ್ರಮ ಮರುಕಳಿಸಿರುವುದಕ್ಕೆ ಪಾಲ್ತೂರ್ ಕುಟುಂಬ ಹರ್ಷ ವ್ಯಕ್ತಪಡಿಸಿದ್ದು, ಹಣ್ಣನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಮುಗಿಬೀಳುತ್ತಿದ್ದಾರೆ.
