ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದವರ ವಿರುದ್ಧ ಅಬಕಾರಿ ಇಲಾಖೆ ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಜಂಟಿ ಕಾರ್ಯಾಚರಣೆ ನಡೆಸಿದೆ.ಪೊಲೀಸ್ ಶ್ವಾನ ಅಲೆಕ್ಸ್ನ ನಾರ್ಕೋಟಿಕ್ ಶೋಧ ಕಾರ್ಯಾಚರಣೆಯಲ್ಲಿ ಅನುಮಾನಾಸ್ಪದ ಕೆಂಪು ಬಣ್ಣದ ಬ್ಯಾಗ್ ಪತ್ತೆಯಾಗಿದ್ದು, ಪರಿಶೀಲನೆ ವೇಳೆ ಬರೋಬ್ಬರಿ 8.225 ಕೆ.ಜಿ. ಒಣ ಗಾಂಜಾ ಪತ್ತೆಯಾಗಿದೆ.
ಹೊಸಪೇಟೆ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ನಂಬರ್ 1ರಲ್ಲಿ ಅಬಕಾರಿ ಇಲಾಖೆ ಹಾಗೂ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡ ಜಂಟಿ ಕಾರ್ಯಾಚರಣೆ ನಡೆಸಿದೆ. ಮಾದಕವಸ್ತುಗಳ ಅಕ್ರಮ ಸಾಗಾಟ ಪತ್ತೆಗಾಗಿ ಪೊಲೀಸ್ ಶ್ವಾನ ಅಲೆಕ್ಸ್ನ ನಾರ್ಕೋಟಿಕ್ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಈ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಕೆಂಪು ಬಣ್ಣದ ಬ್ಯಾಗ್ ಪರಿಶೀಲಿಸಿದಾಗ ಐದು ಪ್ಯಾಕೆಟ್ಗಳಲ್ಲಿ ತುಂಬಿಸಿಟ್ಟಿದ್ದ ಒಟ್ಟು 8.225 ಕೆ.ಜಿ. ಒಣ ಗಾಂಜಾ ಪತ್ತೆಯಾಗಿದೆ.
ಅಬಕಾರಿ ಅಧಿಕಾರಿಗಳು ಪತ್ತೆಯಾದ ಗಾಂಜಾವನ್ನು ವಶಕ್ಕೆ ಪಡೆದಿದ್ದು, ಇದರ ಅಂದಾಜು ಮಾರುಕಟ್ಟೆ ಮೌಲ್ಯ 8 ಲಕ್ಷ 25 ಸಾವಿರ ರೂಪಾಯಿ ಎಂದು ತಿಳಿದುಬಂದಿದೆ. ಈ ಸಂಬಂಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಬಕಾರಿ ಉಪ ನಿರೀಕ್ಷಕಿ ಹೆಚ್. ವೀರಮ್ಮ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
