ಚಿಕ್ಕೋಡಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾದ ಯಡೂರ ಗ್ರಾಮದಲ್ಲಿ ಲಿಂಗೈಕ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ 23ನೇ ಚಿರಲಿಂಗಾಂಗ ಸಾಮರಸ್ಯ ದಿನೋತ್ಸವವು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಜರುಗಿತು.
ಈ ವಿಶೇಷ ದಿನದ ಅಂಗವಾಗಿ ಶ್ರೀಗಳ ಸಮಾಧಿಗೆ ಪವಿತ್ರ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮಗಳು ವಿಧಿವಿಧಾನಗಳೊಂದಿಗೆ ನೆರವೇರಿದವು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಶ್ರೀಕಾಡಸಿದ್ದೇಶ್ವರ ಮಠ ಹಾಗೂ ಶ್ರೀವೀರಭದ್ರೇಶ್ವರ ಮಠದ ಧರ್ಮಾಧಿಕಾರಿಗಳಾದ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಮಹಾಸ್ವಾಮೀಜಿಗಳು ಹಾಗೂ ಸ್ಥಳೀಯ ಶಾಸಕರಾದ ಗಣೇಶ ಹುಕ್ಕೇರಿ ಅವರು ಲಿಂಗೈಕ್ಯ ಶ್ರೀಗಳ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಧಾರ್ಮಿಕ ಸಮಾರಂಭದಲ್ಲಿ ಬನ್ನಹಟ್ಟಿಯ ಶ್ರೀಗಳು, ಅಂಬಿಕಾನಗರದ ಶ್ರೀಗಳು ಹಾಗೂ ಶ್ರೀಶೈಲ ಗುರೂಜಿ ಸೇರಿದಂತೆ ಅನೇಕ ಪೂಜ್ಯರು ಪಾಲ್ಗೊಂಡು ಭಕ್ತರನ್ನು ಹರಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ರಾಜಕೀಯ ಹಾಗೂ ಗಣ್ಯ ವ್ಯಕ್ತಿಗಳಾದ ಸಂಜಯ ಪಾಟೀಲ, ಈರಗೌಡ ಪಾಟೀಲ, ಶಿವು ಹಂಜಿ, ಪಾಂಡುರಂಗ ಕೋಳಿ, ಮಹಾನಿಂಗ ಭ್ರಿಂಗಿ, ಅಣ್ಣಯ್ಯ ಪೂಜಾರಿ,ವಿಜಯ ಹಿರೇಮಠ,ಸುನೀಲ ಬಿರದೆ,
ಅಡವಯ್ಯ ಅರಳಿಕಟ್ಟಿಮಠ, ಶಂಭು ಮಠಪತಿ, ವೃಷಭ ಪೂಜಾರಿ ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಅಲ್ಲದೆ, ಶ್ರೀ ಸಿದ್ದಲಿಂಗ ಗುರುಕುಲ ಪಾಠಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.
