ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಮಗು ಹುಟ್ಟಿದ ಸಂಭ್ರಮದ ಪಾರ್ಟಿ ವಿಚಾರಕ್ಕೆ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೊಹರಂ ಹಬ್ಬದ ದಿನದಂದೇ ನಡೆದ ಈ ಭೀಕರ ಹತ್ಯೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಗಂಡು ಮಗು ಹುಟ್ಟಿದ ಖುಷಿಯಲ್ಲಿ ಆಯೋಜಿಸಿದ್ದ ಪಾರ್ಟಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ನಡೆದಿದೆ. ಮೊಹರಂ ಹಬ್ಬದಂದು ನಡೆದಿದ್ದ ಈ ಕರಾಳ ಕೃತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಗ್ರಾಮದ ನಿವಾಸಿ ಹಣಮಂತ ಕೊಲೆಯಾದ ದುರ್ದೈವಿಯಾಗಿದ್ದಾನೆ. ಹಬ್ಬದ ಸಂಭ್ರಮದ ವೇಳೆಯಲ್ಲೇ ಇಂತಹದ್ದೊಂದು ಘೋರ ದುರಂತ ನಡೆದಿರುವುದು ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ.
ಮೊಹರಂ ಹಬ್ಬದಂದು ಗ್ರಾಮದ ಕಟ್ಟೆ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದ ಇಬ್ಬರ ನಡುವೆ ಮಗು ಹುಟ್ಟಿದ ಪಾರ್ಟಿ ವಿಚಾರವಾಗಿ ದಿಢೀರ್ ಗಲಾಟೆ ಆರಂಭವಾಗಿದೆ. ಜಗಳ ತಾರಕಕ್ಕೇರಿದಾಗ ತೀವ್ರ ಕೋಪಗೊಂಡ ವಿಶ್ವನಾಥ ಎಂಬಾತ, ಅಲ್ಲೇ ಇದ್ದ ದೊಡ್ಡ ಕಲ್ಲಿನಿಂದ ಹಣಮಂತನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಹಣಮಂತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ನೇಸರಗಿ ಪೊಲೀಸರು ಆರೋಪಿ ವಿಶ್ವನಾಥನನ್ನು ಬಂಧಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
