Bailahongala

ಬೈಲಹೊಂಗಲ: ಹಜರತ್ ಹಾಫೀಜ ಬರೀ ಷಾ ವಲಿ ಉರುಸ್; ಭಾವೈಕ್ಯತೆಯ ಸಂದೇಶ ಸಾರಿದ ಸಂದಲ್ ಉತ್ಸವ!

Share

ಬೈಲಹೊಂಗಲ ನಗರದ ದೊಡ್ಡಕೆರೆಯ ಪಕ್ಕದಲ್ಲಿರುವ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಹಜರತ್ ಸೈಯ್ಯದ ಹಾಫೀಜ ಬರೀ ಷಾ ವಲಿ ಅವರ ಪವಿತ್ರ ಸಂದಲ್ ಹಾಗೂ ಉರುಸ್ ಮಹೋತ್ಸವವು ಅಹಲೆ ಸುನ್ನತವಲ್ ಜಮಾತ್ ವತಿಯಿಂದ ಗುರುವಾರ ಸಂಜೆ ಭಕ್ತಿಭಾವ ಮತ್ತು ಸಂಭ್ರಮದಿಂದ ನಡೆಯಿತು.

ಹಜರತ್ ಹಾಫೀಜ ಬರೀ ಷಾ ವಲಿ ಅವರ ದರ್ಗಾವು ಹಲವು ದಶಕಗಳಿಂದ ಹಿಂದೂ-ಮುಸ್ಲಿಂ ಸೌಹಾರ್ದತೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಪ್ರತಿವರ್ಷ ನಡೆಯುವ ಉರುಸ್ ಮಹೋತ್ಸವದಲ್ಲಿ ಎಲ್ಲಾ ಸಮುದಾಯಗಳ ಜನರು ಭಾಗವಹಿಸುವುದು ವಿಶೇಷವಾಗಿದ್ದು, ಈ ಬಾರಿಯ ಉರುಸ್ ಕೂಡ ಸರ್ವಧರ್ಮ ಸಮನ್ವಯ ಮತ್ತು ಸಾಮಾಜಿಕ ಸೌಹಾರ್ದತೆಯ ಸಂದೇಶವನ್ನು ಸಾರಿತು.

ಉರುಸ್ ಅಂಗವಾಗಿ ದರ್ಗಾವನ್ನು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ಸಾವಿರಾರು ಹಿಂದೂ ಹಾಗೂ ಮುಸ್ಲಿಂ ಭಕ್ತರು ದರ್ಗಾಕ್ಕೆ ಆಗಮಿಸಿ ಹೂಮಾಲೆ, ಚಾದರ್ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

ತಮ್ಮಇಷ್ಟಾರ್ಥಗಳ ಈಡೇರಿಕೆಗಾಗಿ ದುವಾ ಬೇಡಿಕೊಂಡರು. ದರ್ಗಾ ಆವರಣದಲ್ಲಿ ದಿನವಿಡೀ ಭಕ್ತರ ಸಂಚಾರ ಕಂಡುಬಂದಿದ್ದು, ಧಾರ್ಮಿಕ ವಾತಾವರಣ ಮನೆಮಾಡಿತ್ತು.
ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಸೂಫಿ ಸಂತರು, ಮಲಂಗ ಬಾಬಾಗಳು ಹಾಗೂ ಧರ್ಮಗುರುಗಳು ಭಾಗವಹಿಸಿ ಪವಿತ್ರ ಗಂಧ (ಸಂದಲ್) ಕಾರ್ಯಕ್ರಮ ನೆರವೇರಿಸಿದರು.

ದರ್ಗಾದಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಪ್ರವಚನ ಹಾಗೂ ದುವಾಗಳು ನಡೆದವು. ನಾಡಿನ ಸುಖ-ಶಾಂತಿ, ಸೌಹಾರ್ದತೆ, ಸರ್ವಧರ್ಮ ಸಮನ್ವಯ ಹಾಗೂ ದೇಶದ ಅಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಪವಿತ್ರ ಹಜ್ ಯಾತ್ರೆ ಮುಗಿಸಿಕೊಂಡು ಸ್ವದೇಶಕ್ಕೆ ಮರಳಿದ ಹಾಜಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಬೋಳನ್ನವರ ಅವರ ಸಮಾಜಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಬೈಲಹೊಂಗಲದ ಹಜರತ್ ಹಾಫೀಜ ಬರೀ ಷಾ ವಲಿ ದರ್ಗಾದ ಸಂದಲ್ ಮತ್ತು ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಾನ್ ಸೂಫಿ ಸಂತರು ಹಾಗೂ ಮಲಂಗ ಬಾಬಾಗಳನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಸರ್ವಧರ್ಮ ಸೌಹಾರ್ದತೆ, ಭಾವೈಕ್ಯತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ ಹಜರತ್ ಹಾಫೀಜ ಬರೀ ಷಾ ವಲಿ (ರ.ಅ.) ಅವರ ಉರುಸ್ ಮಹೋತ್ಸವವು ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿಪೂರ್ವಕವಾಗಿ ಹಾಗೂ ವಿಜೃಂಭಣೆಯಿಂದ ನೆರವೇರಿತು.

ಶಾನೂಲ ಮತ್ತೆಖಾನ
ಬೈಲಹೊಂಗಲ

Tags:

error: Content is protected !!