ಬೆಳಗಾವಿಯ ಸುಭಾಷ್ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ಸಮಸ್ಯೆ ಬಗೆಹರಿಸದಿದ್ದರೆ ನೂತನ ರಸ್ತೆ ಕಾಮಗಾರಿ ತಡೆಯುವುದಾಗಿ ಎಚ್ಚರಿಸಿದ್ದಾರೆ.

ಬೆಳಗಾವಿ ಸುಭಾಷ ನಗರದ ಈ ಭಾಗದಲ್ಲಿ ನೀರಿನ ಒತ್ತಡ ಅತ್ಯಂತ ಕಡಿಮೆ ಇರುವುದರಿಂದ ಕೇವಲ ಕೆಲವು ಮನೆಗಳಿಗೆ ಮಾತ್ರ ನೀರು ತಲುಪುತ್ತಿದ್ದು, ಬಹುತೇಕ ನಿವಾಸಿಗಳು ಪ್ರತಿದಿನ ಮಧ್ಯರಾತ್ರಿ 3 ಗಂಟೆಯವರೆಗೂ ನೀರಿಗಾಗಿ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ಹೊರಹಾಕಿರುವ ಸ್ಥಳೀಯರು, ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸದ ಹೊರತು ಈ ಭಾಗದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ನೂತನ ಸಿಮೆಂಟ್ ರಸ್ತೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
