Bailahongala

ಟೋಲ್ ತಪ್ಪಿಸಲು ಕಳ್ಳದಾರಿ; ಟಿಪ್ಪರ್‌ಗಳನ್ನು ತಡೆದು ರೈತರ ಆಕ್ರೋಶ!

Share

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಈಗೊಂದು ಹೈವೋಲ್ಟೇಜ್ ಬ್ರೇಕಿಂಗ್ ಸುದ್ದಿ ಸಿಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಟೋಲ್ ತಪ್ಪಿಸಲು ಕಳ್ಳದಾರಿ ಹಿಡಿದು ನುಗ್ಗುತ್ತಿದ್ದ ಭಾರಿ ಗಾತ್ರದ ಟಿಪ್ಪರ್‌ಗಳನ್ನು ತಡೆದು ಗ್ರಾಮಸ್ಥರು ಹಾಗೂ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಮೂರ್ನಾಲ್ಕು ಗಂಟೆಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಮತ್ತು ಎಂ.ಕೆ.ಹುಬ್ಬಳ್ಳಿ ಮಾರ್ಗ ಮಧ್ಯೆ ರೈತರು ಮತ್ತು ಗ್ರಾಮಸ್ಥರು ರಸ್ತೆಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಟೋಲ್ ಪಾವತಿಸುವುದನ್ನು ತಪ್ಪಿಸಲು ಹತ್ತು ಚಕ್ರದ ನಲವತ್ತಕ್ಕೂ ಹೆಚ್ಚು ಟಿಪ್ಪರ್‌ಗಳು ಎಂ-ಸ್ಯಾಂಡ್ ಹಾಗೂ ಕಡಿ ತುಂಬಿಕೊಂಡು ಕಳ್ಳಮಾರ್ಗದ ಮೂಲಕ ನುಗ್ಗುತ್ತಿದ್ದವು. ರೈತರು ತಮ್ಮ ಜಮೀನುಗಳಿಗೆ ಓಡಾಡಲು ನಿರ್ಮಿಸಲಾಗಿರುವ ಗ್ರಾಮೀಣ ರಸ್ತೆಯಲ್ಲೇ ಈ ಬೃಹತ್ ಗಾತ್ರದ ಓವರ್‌ಲೋಡ್ ವಾಹನಗಳು ಸಂಚರಿಸುತ್ತಿರುವುದರಿಂದ, ರೈತರು ರಸ್ತೆಯಲ್ಲಿ ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಈ ಮಾರ್ಗದಲ್ಲಿ ಸಂಭವಿಸಿದ ಅಪಘಾತಗಳಿಂದ ಅನೇಕ ಸಾವು-ನೋವುಗಳಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಆಕ್ರೋಶಿತ ರೈತರು ಕಟುವಾಗಿ ಪ್ರಶ್ನಿಸಿದ್ದಾರೆ.

ಇನ್ನು ಇಷ್ಟೆಲ್ಲಾ ಅಕ್ರಮವಾಗಿ ಬೃಹತ್ ವಾಹನಗಳು ಕಳ್ಳಮಾರ್ಗದಲ್ಲಿ ಸಂಚರಿಸುತ್ತಿದ್ದರೂ ಆರ್‌ಟಿಒ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಧಿಕಾರಿಗಳು ಹಪ್ತಾ ವಸೂಲಿ ಮಾಡಿಕೊಂಡು ಈ ದಂಧೆಗೆ ಮೂಕಪ್ರೇಕ್ಷಕರಾಗಿದ್ದಾರೆ ಎಂದು ದೂರಿದ ರೈತರು, ಜಮೀನಿಗೆ ಹೋಗುವಾಗ ಮೈಮೇಲೆ ವಾಹನಗಳನ್ನು ಹರಿಸುವಂತೆ ಚಾಲಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮೂರ್ನಾಲ್ಕು ಗಂಟೆಗಳಿಂದ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದರೂ ಯಾವುದೇ ಅಧಿಕಾರಿ ಸ್ಥಳಕ್ಕೆ ಆಗಮಿಸಿಲ್ಲ. ತಕ್ಷಣವೇ ಈ ಬೃಹತ್ ವಾಹನಗಳ ಸಂಚಾರವನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!