Belagavi

ಬೆಳಗಾವಿಯ ವಿಶ್ವಗುರು ಬಸವ ಮಂಟಪದಲ್ಲಿ ರಕ್ತದಾನ ಹಾಗೂ ನೇತ್ರದಾನ ಶಿಬಿರ

Share

ಬೆಳಗಾವಿಯಲ್ಲಿ ಬಸವ ಕಾಯಕ ಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವ ದಳದ ಸಂಯುಕ್ತಾಶ್ರಯದಲ್ಲಿ ವಚನ ಶಾಸ್ತ್ರ ಪಿತಾಮಹರ ಸಂಸ್ಮರಣೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಮತ್ತು ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿಯ ಮಹಾಂತೇಶನಗರದ ವಿಶ್ವಗುರು ಬಸವ ಮಂಟಪದಲ್ಲಿ ಬಸವ ಕಾಯಕ ಜೀವಿಗಳ ಸಂಘ ಮತ್ತು ರಾಷ್ಟ್ರೀಯ ಬಸವ ದಳದ ಸಂಯುಕ್ತಾಶ್ರಯದಲ್ಲಿ ಪ್ರವಚನ ಪಿತಾಮಹ ಹಾಗೂ ವಚನ ಶಾಸ್ತ್ರ ಪಿತಾಮಹರ ಸಂಸ್ಮರಣೋತ್ಸವದ ಅಂಗವಾಗಿ ರಕ್ತದಾನ ಮತ್ತು ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಯಮನಕನಮರಡಿ ಶೂನ್ಯ ಸಂಪಾದನಾ ಮಠದ ಶ್ರೀ ಸದ್ಗುರು ಶ್ರೀ ಸಿದ್ಧ ಬಸವ ದೇವರು ದಿವ್ಯ ಸಾನಿಧ್ಯ ವಹಿಸಿದ್ದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೆಎಲ್ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ್ ಕವಟಗಿಮಠ್, ರಕ್ತದಾನವು ಮತ್ತೊಬ್ಬರ ಜೀವ ರಕ್ಷಿಸುವ ಅತ್ಯಂತ ಶ್ರೇಷ್ಠ ಹಾಗೂ ಪುಣ್ಯದ ಕಾರ್ಯವಾಗಿದೆ ಎಂದರು. ಅಪಘಾತಕ್ಕೊಳಗಾದವರಿಗೆ ಹಾಗೂ ಕ್ಯಾನ್ಸರ್ ಪೀಡಿತರಿಗೆ ಮಾತ್ರ ರಕ್ತದ ನಿಜವಾದ ಮಹತ್ವ ಏನೆಂಬುದು ತಿಳಿಯುತ್ತದೆ; ಆ ನಿಟ್ಟಿನಲ್ಲಿ ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಂತೆ ನಮ್ಮ ಕಾರ್ಯಗಳು ಸಮಾಜಮುಖಿಯಾಗಿರಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ಧರು, ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಅನೀಲ ಬೆಣಕೆ ಅವರು, ಈಗಾಗಲೇ 20ಕ್ಕೂ ಹೆಚ್ಚು ಜನರಿಂದ ರಕ್ತದಾನ ಮಾಡಿಸಲಾಗಿದ್ದು, ರಕ್ತದಾನಿಗಳಿಗೆ ಒಂದು ಲಕ್ಷ ರೂಪಾಯಿವರೆಗಿನ ಉಚಿತ ಆರೋಗ್ಯ ವಿಮೆಯನ್ನು ಕಲ್ಪಿಸುವ ವಿನೂತನ ಯೋಜನೆಯನ್ನು ಶ್ಲಾಘಿಸಿದರು. ಮುಂಬರುವ ದಿನಗಳಲ್ಲಿ ಸ್ಥಳೀಯ ಸಮಾಜ ಬಾಂಧವರ ಸಹಕಾರದೊಂದಿಗೆ ಈ ರೀತಿಯ ಜನಪರ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಿ, ಭವನದ ಮೇಲ್ಛಾವಣಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಸಂಘಟಕರು ಇದೇ ವೇಳೆ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಶಂಕರ್ ಗುಡಸ್ ಅವರು ರಕ್ತದಾನ ಶಿಬಿರಕ್ಕೆ ವ್ಯಾಪಕ ಸ್ಪಂದನೆ ದೊರೆತಿದ್ದು, ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಿಂದಲೂ ನಾಲ್ವರು ಮಹಿಳೆಯರು ಆಗಮಿಸಿ ರಕ್ತದಾನ ಮಾಡಿದ್ದಾರೆ. ಬಸವ ತತ್ವದಡಿ ಸಮಾಜದ ಮುಖ್ಯಸ್ಥರನ್ನು ಒಳಗೊಂಡು ಬಡ ಮಕ್ಕಳ ಉಚಿತ ವಸತಿ ನಿಲಯ ಸೇರಿದಂತೆ ವಿವಿಧ ಜನಪರ ಮತ್ತು ಕಾಯಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆಯ ನಿರ್ದೇಶಕರು ಹಾಗೂ ಪ್ರಮುಖ ಗಣ್ಯರಾದ ಮಹಾಂತೇಶ್ ಕವಟಗಿಮಠ್ ಅವರ ಸಹಕಾರ ಮತ್ತು ಕೆಎಲ್ಇ ಸಂಸ್ಥೆಯ ವೈದ್ಯಕೀಯ ಕೊಡುಗೆಗಳನ್ನು ಶ್ಲಾಘಿಸಿ, ಸಂಘಟನೆಯ ಸಾಮಾಜಿಕ ಕಾರ್ಯಗಳಿಗೆ ಎಲ್ಲರ ಬೆಂಬಲವನ್ನು ನೀಡಬೇಕೆಂದರು.

ಅಧ್ಯಕ್ಷತೆಯನ್ನು ಅಶೋಕ ಬೆಂಡಿಗೇರಿ, ಸೂರ್ಯಕಾಂತ ಭಾಂವಿ ವಹಿಸಿದ್ದರು. ಶಿವಲಿಂಗಪ್ಪ ಕಿತ್ತೂರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶರಣು ಲಿಂಗಾಯತ್, ನಿತೀನ್ ಗುಡಸ್, ಮುತ್ತಪ್ಪ ಗೊಡ್ಯಾಳ, ಶ್ರೀಕಾಂತ ಪಾಟೀಲ್, ಮಲ್ಲಿಕಾರ್ಜುನ ಬಾಬಾನಗರ, ಮಹಾಂತೇಶ್ ಗುಡಸ ಸೇರಿದಂತೆ ಇನ್ನುಳಿದವರು ಶ್ರಮಿಸಿದರು. ಹಲವರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮತ್ತು ನೇತ್ರದಾನವನ್ನು ಮಾಡಿದರು.

Tags:

error: Content is protected !!